ADVERTISEMENT

ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವ 8ರಂದು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 14:00 IST
Last Updated 5 ಫೆಬ್ರುವರಿ 2025, 14:00 IST

ಅರಸೀಕೆರೆ: ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ 350ಕ್ಕೂ ಹೆಚ್ಚು ಆಳ್ವಾಸ್ ಕಲಾವಿದ ವಿದ್ಯಾರ್ಥಿಗಳು ಫೆ.8ರಂದು ಶನಿವಾರ ಸಂಜೆ ಸಾಂಸ್ಕೃತಿಕ ಉತ್ಸವ ಪ್ರದರ್ಶನ ನೀಡಲಿದ್ದಾರೆ ಎಂದು ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ ಅರಸೀಕೆರೆ ಘಟಕದ ಅಧ್ಯಕ್ಷ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಿ.ಎಚ್. ರಸ್ತೆಯಲ್ಲಿರುವ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರವೇಶ ಉಚಿತವಿದೆ. 14 ನೃತ್ಯಗಳನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿರುವ ಕಲಾವಿದರು ಮೆಚ್ಚುಗೆ ಗಳಿಸಿದ್ದಾರೆ ಎಂದರು.

ಮುಂದಿನ ಪೀಳಿಗೆಗೆ ಈ ಸಂಸ್ಕೃತಿಕ ವೈಭವ ಪರಿಚಯಿಸಲು ಅಪರೂಪದ ಈ ಕಾರ್ಯಕ್ರಮವನ್ನು ಅರಸೀಕೆರೆ ನಗರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. 350ಕ್ಕೂ ಹೆಚ್ಚಿನ ವಿದ್ಯಾರ್ಥಿ ಕಲಾವಿದರನ್ನು ಕರೆತಂದು ಪ್ರದರ್ಶನವನ್ನು ಉಚಿತವಾಗಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ADVERTISEMENT

ತಾಲ್ಲೂಕಿನ ಎಲ್ಲಾ ಕಲಾಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಒಂದು ಸಾಂಸ್ಕೃತಿಕ ಕಲಾ ವೈಭವವನ್ನು ವೀಕ್ಷಿಸಿ ರಂಜಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.

ಶಾಸ್ತ್ರೀಯ ನೃತ್ಯ- ಭೋ ಶಂಭೋ, ಆಂಧ್ರ ಜನಪದ ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷಗಾನ ‘ಶ್ರೀರಾಮ ಪಟ್ಟಾಭಿಷೇಕ’, ಮಣಿಪುರಿ ಸ್ಟಿಕ್ ಸ್ಟಿಕ್ ಡ್ಯಾನ್ಸ್, ಶಾಸ್ತ್ರೀಯ ನೃತ್ಯ ‘ನವದುರ್ಗೆಯರು’, ಗುಜರಾತಿನ ಗಾರ್ಭ ಮತ್ತು ದಾಂಡಿಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಡೊಳ್ಳು ಕುಣಿತ, ಸೃಜನಾತ್ಮಕ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ ಪ್ರದರ್ಶಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ನುಡಿಸಿರಿ ವಿರಾಸತ್ ಅರಸೀಕೆರೆ ಘಟಕದ ಉಪಾಧ್ಯಕ್ಷ ಜಾವಗಲ್ ಪ್ರಸನ್ನ ಕುಮಾರ್‌, ಕಸಾಪ ಅಧ್ಯಕ್ಷ ಚಂದ್ರಶೇಖರ್, ಶ್ರೀರಾಮ್ ಜಮದಗ್ನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.