ADVERTISEMENT

ಅಂಗನವಾಡಿ ಶಿಕ್ಷಕರ ಸಂಬಳ ಹೆಚ್ಚಿಸಿ: ಶಾಸಕ ಸಿಎನ್ ಬಾಲಕೃಷ್ಣ ಮನವಿ

ಸರ್ಕಾರಕ್ಕೆ ಶಾಸಕ ಸಿಎನ್ ಬಾಲಕೃಷ್ಣ ಮನವಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 1:38 IST
Last Updated 16 ಅಕ್ಟೋಬರ್ 2025, 1:38 IST
ನುಗ್ಗೇಹಳ್ಳಿ ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ  ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಅಂಗವಾಗಿ ಗ್ರಾಮದ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಯಿತು. ಶಾಸಕ ಸಿ.ಎನ್. ಬಾಲಕೃಷ್ಣ ಪಾಲ್ಗೊಂಡಿದ್ದರು 
ನುಗ್ಗೇಹಳ್ಳಿ ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ  ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಅಂಗವಾಗಿ ಗ್ರಾಮದ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಯಿತು. ಶಾಸಕ ಸಿ.ಎನ್. ಬಾಲಕೃಷ್ಣ ಪಾಲ್ಗೊಂಡಿದ್ದರು    
ತಾಲ್ಲೂಕಿನಲ್ಲಿದೆ 400ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರ | 200 ಕೇಂದ್ರಗಳಿಗೆ ಬೇಕಿದೆ ಹೊಸ ಕಟ್ಟಡ ||ಗರ್ಭಿಣಿಯರಿಗೆ ಸೀಮಂತ ಕಾರ್ಯ

ನುಗ್ಗೇಹಳ್ಳಿ: ‘ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಹೆಚ್ಚಿದೆ. ಅಂಗನವಾಡಿ ಶಿಕ್ಷಕರ ಸೇವೆಯನ್ನು ಪರಿಗಣಿಸಿ ಸಂಬಳ ಹೆಚ್ಚಳ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಮನವಿ ಮಾಡಿದರು.

ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಮತ್ತು ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಸುಮಾರು 400ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ ಸುಮಾರು 200 ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ’ ಎಂದರು.

ADVERTISEMENT

ಶಿಶು ಅಭಿವೃದ್ಧಿ ಇಲಾಖೆ ಸಿಡಿಪಿಒ ಇಂದ್ರ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಲಾಖೆ ವತಿಯಿಂದ ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಫಲಾನುಭವಿಗಳಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಬಾಲ್ಯ ವಿವಾಹಗಳನ್ನು ತಡೆಗಟ್ಟುವ ದೃಷ್ಟಿಯಿಂದ ಎಲ್ಲರೂ ಕೈಜೋಡಿಸಿದರೆ ಈ ಪಿಡುಗನ್ನು ತಡೆಗಟ್ಟಬಹುದಾಗಿದೆ’ ಎಂದರು.

ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಹುಲಿಕೆರೆ ಸಂಪತ್ ಕುಮಾರ್ ಮಾತನಾಡಿದರು.

ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ವಿವಿಧ ಬಗೆಯ ತರಕಾರಿ ಹಣ್ಣುಗಳು ಪೌಷ್ಟಿಕ ಆಹಾರಗಳು ಮತ್ತು ವಿವಿಧ ಬಗೆಯ ಸೊಪ್ಪು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಧಾನ್ಯಗಳನ್ನು ಬಳಸಿ ವಿವಿಧ ಬಗೆಯ ಚಿತ್ರಗಳನ್ನು ರಚಿಸಲಾಗಿತ್ತು. ಗ್ರಾಮದ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಯಿತು.

ಡಾ.ರಚಿತಾ, ಗ್ರಾ.ಪಂ. ಸದಸ್ಯರಾದ ಆಶಾದೇವಿ ಪ್ರಕಾಶ್, ಹೊನ್ನಮ್ಮ ಧರಣಿ ಕುಮಾರ್, ಹಿರಿಯಣ್ಣ ಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಮಮತ, ಪಾರ್ವತಮ್ಮ, ಅಂಗನವಾಡಿ ಶಿಕ್ಷಕಿ ಯಶೋಧ, ಮುಖಂಡರಾದ ತೋಪೇಗೌಡ, ದೇವರಾಜ್, ಚಂದ್ರೇಗೌಡ, ವಾರ್ಡನ್ ಮಹೇಶ್, ಸೇರಿದಂತೆ ಕಲ್ಕೆರೆ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯ ಎಲ್ಲಾ ಅಂಗನವಾಡಿಗಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.