ಸಕಲೇಶಪುರ: ಕ್ರೀಡೆ, ಸಾಹಿತ್ಯ, ಪರಿಸರ ಪ್ರಜ್ಞೆ, ಸಾಮಾನ್ಯ ಜ್ಞಾನ, ಸೇವಾ ಮನೋಭಾವನೆಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಿವೈಎಸ್‌ಪಿ ಪ್ರಮೋದ್‌ಕುಮಾರ್ ಹೇಳಿದರು.
ಇಲ್ಲಿಯ ಆಕ್ಸ್‌ಫರ್ಡ್ ಆಂಗ್ಲ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿದರು. ಪಠ್ಯಪುಸ್ತಕದ ವಿಷಯಗಳನ್ನು ಕಲಿತು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದು ನಿಜವಾದ ಶಿಕ್ಷಣವಲ್ಲ. ನಾವು ಬದುಕುತ್ತಿರುವ ನೆಲ, ಜಲ, ಪರಿಸರ, ಜನ ಜೀವನ, ಕುಟುಂಬದೊಂದಿಗಿನ ಬಾಂಧವ್ಯ, ಕಷ್ಟ, ಸುಖ ಹಾಗೂ ಬದುಕಿನ ಮೌಲ್ಯಗಳನ್ನು ಕಲಿಯುವುದು ನಿಜವಾದ ಶಿಕ್ಷಣ ಎಂದರು.
ಉನ್ನತ ಪದವಿಗಳಲ್ಲಿ ರ್‍ಯಾಂಕ್ ಪಡೆದು, ಕೈತುಂಬ ಸಂಬಳ ಪಡೆಯುವ ಉದ್ಯೋಗದಲ್ಲಿದ್ದು, ಕುಟುಂಬ, ಸಮಾಜ ಯಾರೊಂದಿಗೂ ಬೆರೆಯದೇ ಎಷ್ಟೋ ಮಂದಿ ಯಂತ್ರದಂತೆ ಜೀವನ ನಡೆಸುತ್ತಿದ್ದಾರೆ. ಅದು ನಿಜವಾದ ಬದುಕು ಅಲ್ಲ. ವಿದ್ಯೆ ಕಲಿಸಿದ ಗುರು, ಹೆತ್ತು ಹೊತ್ತು ಬೆಳೆಸಿ ದೊಡ್ಡವರನ್ನಾಗಿ ಮಾಡಿರುವ ತಂದೆ ತಾಯಿ ಪ್ರತಿಯೊಬ್ಬರನ್ನೂ ಗೌರವಿಸುವ ಗುಣ ಬೆಳೆಸಿಕೊಳ್ಳಿ ಎಂದರು.
ಯಡೇಹಳ್ಳಿ ಕಾಫಿ ಬೆಳೆಗಾರ ಬಸವಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಮಯ ಹಾಗೂ ಶಿಸ್ತನ್ನು ತಮ್ಮ ಇಡೀ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಮುಖ್ಯಸ್ಥರಾದ ಪಿ.ಎಂ. ಅಹಮ್ಮದ್ ಬಾವ. ಅಧ್ಯಕ್ಷ ಯಾದ್‌ಗಾರ್ ಝಾಕೀರ್, ಕಾರ್ಯದರ್ಶಿ ಯಾದ್‌ಗಾರ್ ಇಬ್ರಾಹಿಂ, ಉಪಾಧ್ಯಕ್ಷ ಯಾದ್‌ಗಾರ್ ಖಾಲೀದ್, ಖಜಾಂಚಿ ಯಾದ್‌ಗಾರ್ ತಾಜ್‌ಉದ್ದೀನ್, ಆಡಳಿತ ವ್ಯವಸ್ಥಾಪಕಿ ಬಿ.ಪಿ. ಲೀಲಾವತಿ, ಶಿಕ್ಷಣ ಸಂಯೋಜಕ ಅಣ್ಣಪ್ಪಸ್ವಾಮಿ, ಪ್ರಾಂಶುಪಾಲರಾದ ನಾಸಿರಾ ಬಾಬು, ಪೋದಾರ್ ಜಂಬೂ ಕಿಟ್ಸ್ ಸೆಂಟರ್ ಹೆಡ್ ಬಿ.ಬಿ. ಸಮೀನಾ ಇದ್ದರು.
ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.