ಹಾಸನ: ನಗರದಲ್ಲಿ ನಿರ್ಮಾಣ ಆಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಆರಂಭಿಸಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಂತೆ ಆಗ್ರಹಿಸಿ ಜನಪರ ಚಳವಳಿಗಳ ಒಕ್ಕೂಟ, ಸಂಘಟನೆ ಹಾಗೂ ಸಂಘ– ಸಂಸ್ಥೆಗಳ ಸದಸ್ಯರು, ನಾಗರಿಕರು, ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಮುಂದೆ ಶನಿವಾರ ಪ್ರತಿಭಟನಾ ಸಭೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ತಿಂಗಳಿನಿಂದೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಸಾವುಗಳು ಜನರನ್ನು ಆತಂಕಕ್ಕೆ ದೂಡಿವೆ. ಜಿಲ್ಲೆಯಲ್ಲಿ ಸಂಭವಿಸಿದ ಹೃದಯಾಘಾತ ಸಾವಿನ ಪ್ರಕರಣಗಳು ದೇಶದಲ್ಲಿಯೇ ಸುದ್ದಿ ಮಾಡಿದವು. ಅದರಲ್ಲೂ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕವನ್ನು ಉಂಟು ಮಾಡಿದೆ ಎಂದರು.
ಈ ಸಂಬಂಧ ಸರ್ಕಾರ ನೇಮಿಸಿದ ತಜ್ಞರ ಸಮಿತಿ ಅಧ್ಯಯನ ಮಾಡಿದ್ದು, ಸರ್ಕಾರಕ್ಕೆ ವಿಸ್ತೃತ ವರದಿ ನೀಡಿದೆ. ಆದರೂ ನಿತ್ಯವೂ ಬಂದಿಲ್ಲೊಂದು ಹೃದಯಾಘಾತ ಪ್ರಕರಣಗಳು ವರದಿ ಆಗುತ್ತಲೇ ಇವೆ ಎಂದು ಹೇಳಿದರು.
ಜನರ ಆರೋಗ್ಯದ ಸಮಸ್ಯೆ ಉಲ್ಬಣಗೊಂಡಿದ್ದು, ಅದರಲ್ಲೂ ಯುವಕರು ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಸ್ಥೂಲಕಾಯದಂತಹ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಇದರಿಂದ ಹೃದ್ರೋಗ, ಪಾರ್ಶ್ವವಾಯು, ಕಿಡ್ನಿ ವೈಫಲ್ಯ, ಮಿದುಳು ಮತ್ತು ನರರೋಗ, ಕ್ಯಾನ್ಸರ್ ಸೇರಿದಂತೆ ನಾನಾ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಸನ ಸೇರಿದಂತೆ ಜಿಲ್ಲೆಯ ಎಲ್ಲ ನಗರಗಳ ಪ್ರತಿ ಬಡಾವಣೆಗಳಲ್ಲಿ ಉದ್ಯಾನಗಳು ಮತ್ತು ಆಟದ ಮೈದಾನಗಳನ್ನು ಆದ್ಯತೆಯ ಆಧಾರದಲ್ಲಿ ನಿರ್ಮಿಸಬೇಕು.ರೂಪ ಹಾಸನ, ಲೇಖಕಿ
ಈ ಎಲ್ಲ ಬೆಳವಣಿಗೆ ನಡುವೆ ಜನರ ಆರೋಗ್ಯದ ತುರ್ತು ಸ್ಥಿತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳು, ಮಾರ್ಗಸೂಚಿಗಳ ಅನ್ವಯ ಹೃದಯ ಕಾಯಿಲೆ ಹಾಗೂ ಇತರೆ ಮಾರಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಉನ್ನತ ಆಸ್ಪತ್ರೆಗಳ ಅವಶ್ಯಕತೆ ಇದೆ. ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಹೈಟೆಕ್ ಆಸ್ಪತ್ರೆ ಕಟ್ಟಡದಲ್ಲಿ ಹೃದ್ರೋಗ ಹಾಗೂ ಇತರೆ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಘಟಕವನ್ನು ತೆರೆಯುವಂತೆ ಆಗ್ರಹಿಸಿದರು.
ಸಭೆಯ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದ ಪ್ರತಿಭಟನಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ, ಸಾಹಿತಿ ರೂಪ ಹಾಸನ, ಮುಖಂಡರಾದ ಎಚ್.ಕೆ. ಸಂದೇಶ್, ಟಿ.ಆರ್. ವಿಜಯ್ ಕುಮಾರ್, ಎಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ, ರಮೇಶ್ ಕಟ್ಟೆ ಬೆಳಗುಲಿ, ಗೀತಾ, ಭಾನುಮತಿ, ಶಬ್ಬೀರ್, ಪುಷ್ಪಾ ಇತರರು ಇದ್ದರು.
117 ವೈದ್ಯರ ಹುದ್ದೆ ಖಾಲಿ
ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಒಟ್ಟು ಮಂಜೂರಾದ 340 ವೈದ್ಯರ ಹುದ್ದೆಗಳಲ್ಲಿ 117 ವೈದ್ಯರ ಹುದ್ದೆಗಳು ಖಾಲಿಯಿವೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಹೇಳಿದರು.
36 ತಜ್ಞ ವೈದ್ಯರು 22 ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ಮತ್ತು 52 ಕರ್ತವ್ಯನಿರತ ವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಒಟ್ಟು ಮಂಜೂರಾದ 1856 ವೈದ್ಯಕೀಯ ಸಿಬ್ಬಂದಿ ಹುದ್ದೆಗಳಲ್ಲಿ 815 ಹುದ್ದೆಗಳು ಖಾಲಿ ಇವೆ. ಮಂಜೂರಾದ 824 ವೈದ್ಯಕೀಯೇತರ ಸಿಬ್ಬಂದಿ ಹುದ್ದೆಗಳಲ್ಲಿ 664 ಖಾಲಿ ಇವೆ ಎಂದರು.
ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಇಡೀ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಳಗೆ ಕೇವಲ ಒಬ್ಬರ ಮಾತ್ರ ಹೃದ್ರೋಗ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಜಿಲ್ಲೆಯ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಸುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.