ಹಾಸನ: ನೇರ ಪರೀಕ್ಷೆ ಮೂಲಕ ಪ್ರಾಂಶುಪಾಲರ ಹುದ್ದೆಗಳನ್ನು 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನೀತಿ ಖಂಡನೀಯ ಎಂದು ಜಿಲ್ಲಾ ಸಹ ಸಂಚಾಲಕಿ ಚೈತ್ರಾ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಕುರಿತಾಗಿ ಕಳಕಳಿ ಹೊಂದಿರುವ, ಶಿಕ್ಷಣ ಸಂಸ್ಥೆಯೊಂದರಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಇನ್ನಿತರೆ ಶಿಕ್ಷಕರ ಮನ ಗೆದ್ದಿರುವವರಿಗೆ ಸಲ್ಲಬೇಕು. ಸರ್ಕಾರ ಬದಲಿಸಿದಂತೆ 5 ವರ್ಷಕ್ಕೊಮ್ಮೆ ಪ್ರಾಂಶುಪಾಲರ ಬದಲಿಕೆ ಶಿಕ್ಷಣ ಸಂಸ್ಥೆಯ ಆರೋಗ್ಯ ಕೆಡಿಸುವುದಲ್ಲದೆ, ಅಸಂಬದ್ಧ, ಅನಾವಶ್ಯಕವಾದ ಹುದ್ದೆಗಾಗಿನ ಪೈಪೋಟಿಗೆ ಶಿಕ್ಷಕರನ್ನು ನೂಕುತ್ತದೆ ಎಂದು ತಿಳಿಸಿದ್ದಾರೆ.
ಇದು ಶಿಕ್ಷಕರು, ವಿದ್ಯಾರ್ಥಿಗಳಿಬ್ಬರಿಗೂ ಮಾರಕವಾಗುತ್ತದೆ. ಈಗಾಗಲೇ ಪದವಿ ಕಾಲೇಜುಗಳು ಕಾಯಂ ಶಿಕ್ಷಕರಿಲ್ಲದೇ ಬಳಲುತ್ತಿವೆ. ಪ್ರಾಂಶುಪಾಲರ ಹುದ್ದೆಯೂ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳುವುದಾದರೆ, ಪ್ರಜಾತಾಂತ್ರಿಕ ಶಿಕ್ಷಣದ ಆಶಯವನ್ನು ಮೂಲೆಗೆ ಸರಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಎಚ್. ನರಸಿಂಹಯ್ಯ ಅವರಂತಹ ಪ್ರಾಂಶುಪಾಲರನ್ನು ಕಂಡ ರಾಜ್ಯ ನಮ್ಮದು. ಮತ್ತೊಬ್ಬ ವಿದ್ಯಾರ್ಥಿ ಪ್ರೇಮಿ, ಶಿಕ್ಷಣ ಪ್ರೇಮಿ ನರಸಿಂಹಯ್ಯ ಬಾರದಂತೆ ಸರ್ಕಾರ ಮಾಡುತ್ತಿರುವ ಈ ಹುನ್ನಾರವನ್ನು ಎಐಡಿಎಸ್ಒ ಖಂಡಿಸುತ್ತದೆ. ಇದರ ವಿರುದ್ಧ ಧ್ವನಿಯೆತ್ತಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.