ADVERTISEMENT

ಅರಕಲಗೂಡು: ದಸರಾ ಉತ್ಸವ ಕಣ್ತುಂಬಿಕೊಂಡ ಜನಸಾಗರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:09 IST
Last Updated 4 ಅಕ್ಟೋಬರ್ 2025, 7:09 IST
ಅರಕಲಗೂಡಿನಲ್ಲಿ ಗುರುವಾರ ರಾತ್ರಿ ನಡೆದ ದಸರಾ ಉತ್ಸವದ ಒಂದು ನೋಟ
ಅರಕಲಗೂಡಿನಲ್ಲಿ ಗುರುವಾರ ರಾತ್ರಿ ನಡೆದ ದಸರಾ ಉತ್ಸವದ ಒಂದು ನೋಟ   

ಅರಕಲಗೂಡು: ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದ ದಸರಾ ಉತ್ಸವವನ್ನು ಸಾವಿರಾರು ಮಂದಿ ಕಣ್ತಂಬಿಕೊಂಡರು.

ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ವಿವಿಧ ದೇವತೆಗಳ ಉತ್ಸವಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸರತಿ ಸಾಲಿನಲ್ಲಿ ಮೆರವಣಿಗೆಯಲ್ಲಿ ಬನ್ನಿ ಮಂಟಪದತ್ತ ತೆರಳಿದ ಉತ್ಸವಗಳ ಮುಂದೆ ಕೀಲುಕುದುರೆ, ವೀರಗಾಸೆ, ಗಾರುಡಿಗೊಂಬೆ ಮುಂತಾದ ಕಲಾತಂಡಗಳು  ಸಾಗಿದವು.

ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಕಕ್ಕಿರಿದು ನಿಂತಿದ್ದ ಜನರು ಉತ್ಸವ ಹಾಗೂ ಕಲಾ ಪ್ರದರ್ಶನಗಳನ್ನು ವೀಕ್ಷಿಸಿದರು. ವಿವಿಧ ಸಂಘ ಸಂಸ್ಥೆಗಳು ಜನರಿಗೆ ಉಚಿತವಾಗಿ ಆಹಾರ ವಿತರಣೆ ನಡೆಸಿದವು. ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ಡಿಜೆ ಏರ್ಪಡಿಸಲಾಗಿತ್ತು. ಮಾದಕ ಗೀತೆಗಳಿಗೆ ಯುವಕ– ಯುವತಿಯರು ಕುಣಿದು ಕುಪ್ಪಳಿಸಿದರು. ಕ್ರೀಡಾಂಗಣದಲ್ಲಿ ಬೀಡು ಬಿಟ್ಟಿದ್ದ ವಸ್ತು ಪ್ರದರ್ಶನದ ಕ್ರೀಡೆಗಳಲ್ಲಿ ಪಾಲ್ಗೊಂಡು ಜನರು ಸಂಭ್ರಮಿಸಿದರು.

ADVERTISEMENT

ಉತ್ಸವಗಳು ಬನ್ನಿಉಮಂಟಪಕ್ಕೆ ಬಂದ ಬಳಿಕ ಶಮಿಪೂಜೆ ನೆರವೇರಿಸಲಾಯಿತು. ತಹಶೀಲ್ದಾರ್ ಕೆ.ಸಿ. ಸೌಮ್ಯ ಕದಳಿ ಛೇದನ ನಡೆಸಿದರು. ಉತ್ಸವದಲ್ಲಿ ಬಂದಿದ್ದ ದೇವತೆಗಳಿಗೆ ಬನ್ನಿ ಸಮರ್ಪಣೆ ಮಾಡಲಾಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು. ಶಾಸಕ ಎ. ಮಂಜು ದಸರಾ ಉತ್ಸವ ಯಶಸ್ವಿಯಾಗಿ ನೆರವೇರಲು ಸಹಕರಿಸಿದವರಿಗೆ ಕೃತಜ್ಞತೆ ತಿಳಿಸಿದರು. ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್. ರಾಮಸ್ವಾಮಿ ಅವರಿಗೆ ದಸರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಅರೇಮಾದನಹಳ್ಳಿ ವಿಶ್ವಕರ್ಮ ಮೂಲಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೆಸವತ್ತೂರಿನ ಬಸವರಾಜೇಂದ್ರ ಸ್ವಾಮೀಜಿ, ಶಿರದನಹಳ್ಳಿ ಸದಾಸೀವ ಸ್ವಾಮೀಜಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಚಿಲುಮೆ ಮಠದ ಮಠಾಧೀಶ ಜಯದೇವ ಸ್ವಾಮೀಜಿ, ಪಪಂ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಬಾನ್ ಷರೀಪ್, ಸದಸ್ಯ ಕೃಷ್ಣಯ್ಯ, ದಸರಾ ಉತ್ಸವ ಸಮಿತಿ ಸದಸ್ಯರು, ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಅರಕಲಗೂಡು ದಸರಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಸಿ. ಸೌಮ್ಯ ಕದಳಿ ಛೇದನ ನಡೆಸಿದರು
ಅರಕಲಗೂಡು ದಸರಾ ಉತ್ಸವದದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.