ಅರಕಲಗೂಡು: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉದ್ಯಾನಗಳಿಗೆ ಮೀಸಲಿರಿಸಿರುವ ಜಾಗಗಳನ್ನು ಪರಿಶೀಲಿಸಿ ಎರಡು ದಿನದಲ್ಲಿ ವರದಿ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ಮುಖ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಉದ್ಯಾನಕ್ಕಾಗಿ ಮೀಸಲಿರಿಸಿದ ಜಾಗಗಳಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದೆ. ಯಾವ, ಯಾವ ಬಡಾವಣೆಯಲ್ಲಿ ಎಷ್ಟೆಷ್ಟು ಜಾಗವನ್ನು ಉದ್ಯಾನಕ್ಕಾಗಿ ಮೀಸಲಿರಿಸಿದೆ. ಅದರ ಸ್ಥಿತಿ,ಗತಿಗಳ ಕುರಿತು ಪರಿಶೀಲಿಸಿ ವರದಿ ನೀಡಬೇಕು’ ಎಂದರು.
‘2025-26ನೇ ಸಾಲಿನ ವಿವಿಧ ಬಾಬ್ತುಗಳ ವಾರ್ಷಿಕ ಹರಾಜಿನ ಅಂತಿಮ ಬಿಡ್ ಅನುಮೋದನೆಗೆ ಸಭೆಯಲ್ಲಿ ಮಂಡಿಸಲಾಯಿತು.
‘ವಾರದ ಸಂತೆ, ದಿನವಹಿ ಸುಂಕ, ಮಾಂಸ, ಕೋಳಿ, ಮೀನು, ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕುರಿತು ಹರಾಜು ಪ್ರಕ್ರಿಯೆ ನಡೆದಿದ್ದು ಜಿಎಸ್‌ಟಿ ಸೇರಿ ₹ 29.43 ಲಕ್ಷ ಆದಾಯ ಬಂದಿದೆ’ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಸದಸ್ಯ ರಮೇಶ್ ವಾಟಾಳ್ ಹರಾಜು ಪ್ರಕ್ರಿಯೆ ಕುರಿತು ಆಕ್ಷೇಪ ವ್ಯಕ್ತಪಡಿಸಿ, ‘ವಾರದ ಸಂತೆ, ದಿನವಹಿ ಸುಂಕ, ಸೇರಿದಂತೆ ಕೆಲವು ಬಾಬುಗಳ ಹರಾಜು ಪ್ರಕ್ರಿಯೆ ಎರಡು, ಮೂರು ಬಾರಿ ನಡೆದರೂ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗಿಲ್ಲ, ಪಟ್ಟಣ ಪಂಚಾಯಿತಿ ಅದಾಯ ಹೆಚ್ಚುವಂತೆ ನಿಗಾವಹಿಸಬೇಕು’ ಎಂದು ಆಗ್ರಹಿಸಿದರು.
‘ನಿಗದಿಪಡಿಸಿದ ಮೊತ್ತಕ್ಕಿಂತ ಕಡಿಮೆ ದರಕ್ಕೆ ಹರಾಜು ಕೂಗಿದ ಪ್ರಕರಣಗಳಲ್ಲಿ ಮರು ಹರಾಜು ಮಾಡಲಾಗಿದೆ. ಯಾರು ಬಿಡ್ ಮಾಡಲು ಮುಂದೆ ಬರದಿದ್ದಾಗ ಬಂದ ಹೆಚ್ಚಿನ ಮೊತ್ತದ ದರಕ್ಕೆ ಅಂತಿಮಗೊಳಿಸಲಾಗಿದೆ’ ಎಂದು ಅಧ್ಯಕ್ಷ ಪ್ರದೀಪ್ ಕುಮಾರ್ ಉತ್ತರಿಸಿದರು.
ಈ ಹಂತದಲ್ಲಿ ಸಭೆಯಲ್ಲಿ ಕೆಲಕಾಲ ಬಿರುಸಿನ ವಾಗ್ವಾದ ನಡೆಯಿತು. ‘ಸಭೆಯಲ್ಲಿ ತೀರ್ಮಾನಿಸಿದ ವಿಷಯಗಳ ಕುರಿತು ಸಭೆಯಲ್ಲಿ ನಡವಳಿ ಪುಸ್ತಕದಲ್ಲಿ ದಾಖಲಿಸಿ ಸಭೆಗೆ ತಿಳಿಸಬೇಕು’ ಎಂದು ರಮೇಶ್ ಒತ್ತಾಯಿಸಿದರು.
2024-25ನೇ ಸಾಲಿನ ಎಸ್ಎಫ್‌ಸಿ ಮುಕ್ತನಿಧಿ ಶೇ 5ರ ಯೋಜನೆಯಲ್ಲಿ ಅಂಗವಿಕಲ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚ ಭರಿಸಲು ಸಹಾಯಧನ ಕೋರಿ ಇಬ್ಬರಿಂದ ಮಾತ್ರ ಅರ್ಜಿಗಳು ಬಂದಿವೆ. ವ್ಯಾಪಕವಾಗಿ ಮಾಹಿತಿ ಇಲ್ಲದ ಕಾರಣ ಮರು ಪ್ರಕಟಣೆ ಹೊರಡಿಸಿ ಒಂದು ವಾರ ಕಾಲಾವಕಾಶ ನೀಡಿ ಅರ್ಜಿ ಅಹ್ವಾನಿಸಿ ಹೆಚ್ಚಿನ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ದೊರಕಿಸಬೇಕು’ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
‘ವಾಣಿಜ್ಯ ಮಳಿಗೆ ಹರಾಜು, 32 ವಸತಿ ಗೃಹಗಳ ಕುರಿತು ನ್ಯಾಯಾಲಯದಲ್ಲಿರುವ ಪ್ರಕರಣ ಸಂಬಂಧ ಹಣ ವ್ಯಯವಾಗುತ್ತಿದೆ ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯ ರಮೇಶ್ ವಾಟಾಳ್ ಆಗ್ರಹಿಸಿದರು.
ಸದಸ್ಯರಾದ ಅನಿಕೇತನ್, ಕೃಷ್ಣಯ್ಯ, ಹೂವಣ್ಣ, ಸುಮಿತ್ರ ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಸುಬಾನ್ ಷರೀಪ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಉಪಸ್ಥಿತರಿದ್ದರು.
ಅಂಬೇಡ್ಕರ್ ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ 2022ರಿಂದ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಗಮನ ಹರಿಸಿಎಚ್.ಎಸ್. ರಶ್ಮಿ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.