ADVERTISEMENT

ಅರಕಲಗೂಡು ಪಟ್ಟಣ ಪಂಚಾಯತ್: ಸಭೆಯಿಂದ ಹೊರನಡೆದ ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 13:28 IST
Last Updated 13 ಮಾರ್ಚ್ 2025, 13:28 IST
ಅರಕಲಗೂಡು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಿಂದ ಹೊರಬಂದ ಸದಸ್ಯರಾದ ರಮೇಶ್ ವಾಟಾಳ್, ಎಚ್.ಎಸ್. ರಶ್ಮಿ, ನಿಖಿಲ್ ಕುಮಾರ್, ಲಕ್ಷ್ಮೀ ಅವರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ಅರಕಲಗೂಡು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಿಂದ ಹೊರಬಂದ ಸದಸ್ಯರಾದ ರಮೇಶ್ ವಾಟಾಳ್, ಎಚ್.ಎಸ್. ರಶ್ಮಿ, ನಿಖಿಲ್ ಕುಮಾರ್, ಲಕ್ಷ್ಮೀ ಅವರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು   

ಅರಕಲಗೂಡು: ಅಜೆಂಡಾದಲ್ಲಿ ಸೇರಿರದ ವಿಷಯಗಳನ್ನು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ನಮೂದಿಸಿರುವ ಜೊತೆಗೆ ಮನಸ್ಸಿಗೆ ಬಂದಂತೆ ವೆಚ್ಚ ತೋರಿಸಲಾಗುತ್ತಿದೆ ಎಂದು ಆರೋಪಿಸಿ, ಪಟ್ಟಣ ಪಂಚಾಯಿತಿ ವಿರೋಧ ಪಕ್ಷದ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು. ನಂತರ ಪಟ್ಟಣ ಪಂಚಾಯಿತಿ ಕಚೇರಿ ಎದುರು ಕುಳಿತು ಪ್ರತಿಭಟಿಸಿದರು.

ಗುರುವಾರ ಅಧ್ಯಕ್ಷ ಪ್ರದೀಪ್‌ಕುಮಾರ್ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು. ಹಿಂದಿನ ಸಭಾ ನಡವಳಿಕೆಗಳನ್ನು ಮಂಡಿಸುತ್ತಿದ್ದಂತೆ, ಸದಸ್ಯರಾದ ರಮೇಶ್ ವಾಟಾಳ್, ಎಚ್.ಎಸ್. ರಶ್ಮಿ, ನಿಖಿಲ್ ಕುಮಾರ್, ಲಕ್ಷ್ಮೀ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಇದರಲ್ಲಿ ಹಲವು ವಿಷಯಗಳು ಹಿಂದಿನ ಸಭೆಯಲ್ಲಿ ಮಂಡನೆಯಾಗಿಲ್ಲ. ಅಜೆಂಡಾದಲ್ಲೂ ಇರಲಿಲ್ಲ. ಆದರೂ ಸರ್ವಾನುಮತದಿಂದ ತೀರ್ಮಾನಿಸಿರುವುದಾಗಿ ನಮೂದಿಸಲಾಗಿದೆ ಎಂದು ಹಿಂದಿನ ಸಭೆಯ ಅಜೆಂಡಾ ಪ್ರತಿಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರದಿಂದ ವಿವಿಧ ಯೋಜನೆಗಳಡಿ ಅನುದಾನ ಬಿಡುಗಡೆಯಾದ ಕಾಮಗಾರಿಗಳನ್ನು ಕೆಲವೇ ವಾರ್ಡ್‌ಗಳಲ್ಲಿ ಕೈಗೊಳ್ಳುತ್ತಿದ್ದು, ಕೆಲವು ವಾರ್ಡ್‌ಗಳನ್ನು ಕಡೆಗಣಿಸಲಾಗಿದೆ. ಮನಸ್ಸಿಗೆ ಬಂದಂತೆ ವೆಚ್ಚವನ್ನು ತೋರಿಸಲಾಗಿದೆ ಎಂದು ಆರೋಪಿಸಿದರು.

ಈ ವೇಳೆ ಸಭೆಯಲ್ಲಿ ತೀವ್ರ ವಾಗ್ವಾದ, ಗದ್ದಲ ಉಂಟಾಯಿತು. ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ, ಸದಸ್ಯರ ಗಮನಕ್ಕೆ ಬಾರದಂತೆ ಯಾವುದೇ ವಿಷಯದ ಕುರಿತು ತೀರ್ಮಾನ ಕೈಗೊಂಡಿಲ್ಲ. ಎಲ್ಲ ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ತಾರತಮ್ಯವಿಲ್ಲದೇ ನಡೆಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ವೆಚ್ಚ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಸದಸ್ಯರಾದ ಹೂವಣ್ಣ, ಕೃಷ್ಣಯ್ಯ, ಅನಿಕೇತನ್, ಸುಮಿತ್ರಾ ಇದನ್ನು ಸಮರ್ಥಿಸಿ, ಪ್ರತಿಪಕ್ಷದ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು. ಇದಕ್ಕೆ ಮಣಿಯದ ವಿರೋಧ ಪಕ್ಷದ ಸದಸ್ಯರು  ಘೋಷಣೆಗಳನ್ನು ಕೂಗುತ್ತ ಸಭೆಯಿಂದ ಹೊರನಡೆದರು. ನಂತರ ಕಚೇರಿ ಎದುರು ಕುಳಿತು ಪ್ರತಿಭಟನೆಗೆ ಮುಂದಾದರು. ಇತ್ತ ಅಧ್ಯಕ್ಷರು ಸಭೆ ಮುಂದುವರಿಸಿದರು.

ಸಂಜೆ ಸಿಬ್ಬಂದಿ ಕಚೇರಿಗೆ ಬೀಗ ಹಾಕಿದ್ದು, ನಂತರ ಪ್ರತಿಭಟನಾನಿರತ ಸದಸ್ಯರೂ ಅಲ್ಲಿಂದ ತೆರಳಿದರು.

ಅರಕಲಗೂಡು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ  ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು.

ತನಿಖೆಗೆ ಒತ್ತಾಯ

ಹಿಂದಿನ ಸಭೆಯ ಅಜೆಂಡಾದಲ್ಲಿ ಕೆಲವು ವಿಷಯಗಳನ್ನು ನಮೂದಿಸಿರಲಿಲ್ಲ. ನಂತರ ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಈ ಬಾರಿಯ ಸಭೆಯಲ್ಲೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಎಂದು ಕೆಲವು ವಿಷಯಗಳನ್ನು ಚರ್ಚೆಗೆ ಇಟ್ಟಿದ್ದು ಮುಖ್ಯಾಧಿಕಾರಿಗಳು ಸಹಿ ಹಾಕಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದರು. ಮನಸ್ಸಿಗೆ ಬಂದಂತೆ ವೆಚ್ಚಗಳನ್ನು ತೋರಿಸಿದ್ದು ಈ  ಕುರಿತು ಮೇಲ್ಮಟ್ಟದಲ್ಲಿ ತನಿಖೆಗೆ ಒತ್ತಾಯಿಸಲಾಗುವುದು. ಇಂದಿನ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೂ ತಮ್ಮ ವಿರೋಧವಿದೆ ಎಂದು ಹೇಳಿದರು.  ಮುಖ್ಯಾಧಿಕಾರಿ ಬಸವರಾಜಪ್ಪ ಟಾಕಪ್ಪ ಶಿಗ್ಗಾವಿ ಪ್ರತಿಭಟನಾನಿರತ ಸದಸ್ಯರ ಮನವೊಲಿಸುವ ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.