ಅರಸೀಕೆರೆ: ಬಾಣಾವಾರ ಹೋಬಳಿಯ ಬೈರಾಂಬುದಿ ಗ್ರಾಮದ ಹೊಂಗ್ಯಮ್ಮ, ಮಲ್ಲಿಗೆಮ್ಮ ದೇವಿಯರರಥೋತ್ಸವವು ಶುಕ್ರವಾರ ಬೆಳಿಗ್ಗೆ ಸಂಭ್ರಮದಿಂದ ನೆರವೇರಿತು.
12 ಹಳ್ಳಿಗಳ ದೇವತೆ ರಥೋತ್ಸವಕ್ಕೆ ಮುಂಚಿತವಾಗಿ ಗುರುವಾರ ರಾತ್ರಿ ಸಡಗರದ ಸಿಡಿ ಮಹೋತ್ಸವ , ಕೆಂಡೋತ್ಸವ ನಡೆದವು. ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ಮೈದಾನದಲ್ಲಿ ಹಾಲುಸಿದ್ದೇಶ್ವರ ಸ್ವಾಮಿ, ಮಲ್ಲಿಗೆಮ್ಮ ದೇವಿಯವರ ಅಡ್ಡಪಲ್ಲಕ್ಕಿ ಉತ್ಸವ , ಚೆಲುವರಾಯ ಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ, ಹೊಂಗ್ಯಮ್ಮ ದೇವಿ , ದೂತರಾಯ ಸ್ವಾಮಿ ಮೂರ್ತಿಗಳ ಉತ್ಸವ ವೈಭವದಿಂದ ನಡೆದವು.
ದೇವಿ ಮೂರ್ತಿಗಳಿಗೆ ವಿಶೇಷ ಪುಷ್ಪಲಂಕಾರ ಮಾಡಿ ಅಲಂಕರಿಸಿದ ರಥದಲ್ಲಿ ಆರೋಹಣ ಮಾಡಲಾಯಿತು. ರಥಕ್ಕೆ ಪೂಜೆ, ಗಾಲಿಗಳಿಗೆ ತೆಂಗಿನಕಾಯಿ ಅರ್ಪಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ದೇವಿ ಸ್ಮರಣೆಯೊಂದಿಗೆ ಶ್ರದ್ಧೆಯಿಂದ ರಥವನ್ನು ಎಳೆದರು. ಚೆಲುವರಾಯ, ದೂತರಾಯ ಸ್ವಾಮಿ ಕುಣಿತ ಜನಮನಸೂರೆಗೊಂಡಿತು. ಮೂಲಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿ, ದರ್ಶನ ಪಡೆದರು.
ಮೈದಾನದಲ್ಲಿ ಪುರಿ ಖಾರದ ವ್ಯಾಪಾರ ಹಾಗೂ ಚಿಣ್ಣರ ಆಟ ಸಮಾನು ಖರೀದಿ ಬಲು ಜೋರಾಗಿತ್ತು. 12 ಗ್ರಾಮಗಳವರು, ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.