ಅರಸೀಕೆರೆ: ಮರೆತುಹೋಗಿದ್ದ ಗ್ರಾಮೀಣ ಕ್ರೀಡೆಗಳು ಈಗ ಮರುಕಳಿಸುತ್ತಿದ್ದು, ಈ ನಿಟ್ಟಿನಲ್ಲಿ ನಾವು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳಸಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಬಾಣಾವರ ಪಟ್ಟಣದ ಜಾವಗಲ್ ರಸ್ತೆಯಲ್ಲಿ ಹಳ್ಳಿಕಾರ್ ಗೋ ಪ್ರೇಮಿಗಳ ಸಂಘದಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ವೀಕ್ಷಿಸಿ ಅವರು ಮಾತನಾಡಿದರು.
‘ಇಂದಿನ ಪೀಳಿಗೆ ಕಬ್ಬಡ್ಡಿ, ಕೊಕ್ಕೊ, ವಾಲಿಬಾಲ್ ಕ್ರೀಡೆಗಳನ್ನು ಮರೆಯುತ್ತಿವೆ. ಗ್ರಾಮೀಣ ಕ್ರೀಡೆಗಳು ದೇಹದ ಬೆಳವಣಿಗೆ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುವುದಲ್ಲದೆ ಎಲ್ಲರ ಗಮನ ಸೆಳೆಯುತ್ತವೆ. ಅದೇ ರೀತಿ ಈ ಜೋಡಿ ಎತ್ತಿನ ಗಾಡಿಯ ಓಟದ ಸ್ಪರ್ಧೆಯೂ ಜೆಟ್ಟಿಯ ಕಾಳಗವಿದ್ದಂತೆ’ ಎಂದರು.
'ಹಳ್ಳಿಕಾರ್ ಗೋವುಗಳ ದರ್ಶನ ಮಾಡಿದರೆ ಶುಭವಾಗುತ್ತದೆ ಎನ್ನುವ ನಂಬಿಕೆ ನಮ್ಮ ಹಿರಿಯರಲ್ಲಿ ಇದೆ, ಆದ್ದರಿಂದ ಇಂತಹ ಹಳ್ಳಿಕಾರ್ ಗೋತಳಿಗಳನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಮುಂದಿನ ದಿನಗಳಲ್ಲಿ ಎಲ್ಲಿ ಬೇಕೆಂದರೆ ಅಲ್ಲಿ ಕ್ರೀಡೆ ನಡೆಸುವುದು ಬೇಡ. 5 ಅಥವಾ 6 ಎಕರೆ ಸರ್ಕಾರಿ ಜಾಗವನ್ನು ನೋಡಿ, ಅದರಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಬಾಣಾವರವು ಈಗ ಪಟ್ಟಣವಾಗಿ ಹೆಸರು ಪಡೆಯುತ್ತಿದ್ದು, ಒಂದು ಕ್ರೀಡಾಂಗಣವನ್ನು ನಾವೆಲ್ಲರೂ ಸೇರಿ ಮಾಡೋಣ’ ಎಂದರು,
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ‘ಈ ಜೋಡಿ ಎತ್ತಿನ ಗಾಡಿಯ ಓಟದ ಸ್ಪರ್ಧೆಯನ್ನು ನೋಡುವುದು ರೋಮಾಂಚನಕಾರಿ. ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಸಲು ನಮ್ಮ ಪ್ರೋತ್ಸಾಹ ಎಂದೆಂದಿಗೂ ಇರುತ್ತದೆ’ ಎಂದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಶ್ರೀನಿವಾಸ್, ತಾಲ್ಲೂಕು ಬಗುರ್ ಹುಕುಂ ಕಮಿಟಿಯ ಸದಸ್ಯ ಬಿ.ಎಂ. ಜಯಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್. ಶ್ರೀಧರ್, ಆಸಿಫ್, ಬಿ.ಎನ್. ಧರ್ಮಣ್ಣ, ಕೃಷ್ಣಮೂರ್ತಿ (ಕಿಟ್ಟಿ), ಗಾರೆ ರವಿಕುಮಾರ್, ಕಾಚಿಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ರಾಯಲ್ ಬಾರ್ ಮಾಲೀಕರಾದ ರಿತೀಶ್ ಶ್ರೀನಿವಾಸ್, ಭರತ್ ರಾಜ್, ಪಶು ವೈದ್ಯ ಡಾ.ಷಡಕ್ಷರಿ, ಹಳ್ಳಿಕಾರ್ ಗೋ ಪ್ರೇಮಿಗಳ ಸಂಘದ ಅಧ್ಯಕ್ಷ ಬಿ.ಎನ್. ಧರ್ಮಣ್ಣ ಹಾಗು ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.