ADVERTISEMENT

ಹಾಸನ | ಆನೆ ಅರ್ಜುನ ಸ್ಮಾರಕ ವಿವಾದ: 19 ಮಂದಿಗೆ ಸಮನ್ಸ್ ಜಾರಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 17:35 IST
Last Updated 11 ಡಿಸೆಂಬರ್ 2025, 17:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಹೆತ್ತೂರು (ಹಾಸನ ಜಿಲ್ಲೆ): ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ದಬ್ಬಳಿಕಟ್ಟೆಯಲ್ಲಿ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆ ವೇಳೆ ಮೃತಪಟ್ಟ ಸಾಕಾನೆ ಅರ್ಜುನನ ಸಮಾಧಿ ಸ್ಥಳದ ಕುರಿತು 2023 ಡಿಸೆಂಬರ್ 5ರಂದು ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ 19 ಮಂದಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಇದು ಪ್ರತಿಭಟನಕಾರರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಪರಿಸರ ಪ್ರೇಮಿ ಹುರುಡಿ ವಿಕ್ರಂ, ಕೆಪಿಸಿಸಿ ಸದಸ್ಯ ಯಡೇಹಳ್ಳಿ ಮಂಜುನಾಥ್, ಉದಯ, ನವೀನ, ನಾಗರಾಜು, ಶೋಧನ್, ರವಿ, ಆಕಾಶ, ರತನ್, ಕಿರಣ್, ಆನಂದ, ದೇವರಾಜು, ತ್ರೀವೇಣಗೌಡ, ಜಯಪ್ಪ, ಸಂತೋಷ, ಸಚಿನ್, ಜಗದೀಶ, ಮನು, ಮಿಥುನ್ ಸೇರಿ 19 ಮಂದಿಗೆ ಡಿ. 30 ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

2023 ರ ಡಿಸೆಂಬರ್ 4 ರಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಾಕಾನೆ ಅರ್ಜುನ ಮೃತಪಟ್ಟ ಮಾರನೇ ದಿನ ಅಂತ್ಯಸಂಸ್ಕಾರದ ವೇಳೆ, ‘ಮೀಸಲು ಅರಣ್ಯದಲ್ಲಿ ಅಂತ್ಯಸಂಸ್ಕಾರ ಮಾಡಬಾರದು, ಬೇರೆಡೆ ಮಾಡಿ ಪ್ರತಿಮೆ ನಿರ್ಮಿಸಬೇಕು’ ಎಂದು ಕೆಲವರು ಆಗ್ರಹಿಸಿ ಪ್ರತಿಭಟಿಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಿದ್ದರು.

‘ಅರ್ಜುನನನ್ನು ಹೂಳಲು ಗುಂಡಿ ತೆಗೆಯುತ್ತಿದ್ದ ಜೆಸಿಬಿ ತಡೆದಿದ್ದಲ್ಲದೇ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ’ ಎಂದು ಪೊಲೀಸ್ ಕಾನ್‌ಸ್ಟೆಬಲ್ ಗಿರೀಶ್ ಬಿ.ಎಂ. ಎಂಬುವವರು ಪ್ರತಿಭಟನೆಯ ದಿನವೇ ನೀಡಿದ ದೂರು ಆಧರಿಸಿ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.