ಸಕಲೇಶಪುರ: ಅರ್ಜುನ ಆನೆ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕು. ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣವನ್ನು ಸರ್ಕಾರ ವಾಪಸ್ ಪಡೆಯದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಎಚ್ಚರಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪೂರ್ವನಿಯೋಜಿತ ಹಾಗೂ ದ್ವೇಷಪೂರಿತ ಕ್ರಮವಾಗಿದ್ದು, ಸರ್ಕಾರದ ನಡೆ ಖಂಡನೀಯ ಎಂದರು.
2023ರ ಡಿಸೆಂಬರ್ 5ರಂದು ಅರ್ಜುನ ಆನೆಯ ಅಂತ್ಯಸಂಸ್ಕಾರ ನಡೆದಿದ್ದು, ಎರಡು ವರ್ಷಗಳ ಬಳಿಕ 19 ಮಂದಿಯನ್ನು ಆರೋಪಿಗಳೆಂದು ಹೆಸರಿಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಘಟನೆ ನಡೆದ ಸಮಯದಲ್ಲಿ ಆರೋಪಿಗಳಿಗೆ ಯಾವುದೇ ನೋಟೀಸ್ ಅಥವಾ ಮಾಹಿತಿ ನೀಡಿಲ್ಲ. ಅಪರಾಧ ನಡೆದಿದ್ದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕಿತ್ತು. ಎರಡು ವರ್ಷ ಮೌನ ವಹಿಸಿ ಇದೀಗ ಏಕಾಏಕಿ ಪ್ರಕರಣ ದಾಖಲಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಹೋರಾಟಗಾರರ ಮೇಲೆ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಗಂಭೀರ ಆರೋಪಗಳಿಲ್ಲ. ಸಣ್ಣಪುಟ್ಟ ದೂರಿನ ಆಧಾರದಲ್ಲಿ ಎಂಟು ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ. ಇದು ಹೋರಾಟಗಾರರು ಹಾಗೂ ರೈತರನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದರು.
ಡಿಸೆಂಬರ್ 30ರಂದು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿರುವುದು ಕಾನೂನು ಪ್ರಕ್ರಿಯೆ. ಸರ್ಕಾರ ತಕ್ಷಣವೇ ಈ ಪ್ರಕರಣವನ್ನು ವಾಪಸ್ ಪಡೆಯಬೇಕು. ಪ್ರಕರಣ ವಾಪಸ್ ಪಡೆಯದಿದ್ದರೆ ಜೆಡಿಎಸ್ ಪಕ್ಷದಿಂದ ರಾಜ್ಯಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಾತಹಳ್ಳಿ ಪುಟ್ಟಸ್ವಾಮಿಗೌಡ, ಪುರಸಭಾ ಮಾಜಿ ಅಧ್ಯಕ್ಷರಾದ ಕಾಡಪ್ಪ, ಮಲ್ನಾಡ್ ಜಾಕೀರ್, ಬಿರಡಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಡಿ. ಸತೀಶ್, ಜೆಡಿಎಸ್ ಮುಖಂಡ ಸಚ್ಚಿನ್ ಪ್ರಸಾದ್, ಜೆಡಿಎಸ್ ಮುಖಂಡ ಭಾಸ್ಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.