ADVERTISEMENT

ಅರ್ಜುನ ಆನೆ ಸ್ಮಾರಕಕ್ಕೆ ಒತ್ತಾಯಿಸಿದವರ ವಿರುದ್ಧದ ಪ್ರಕರಣ ಹಿಂಪಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:51 IST
Last Updated 20 ಡಿಸೆಂಬರ್ 2025, 6:51 IST
ಸಕಲೇಶಪುರ ದಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅರ್ಜನ ಸ್ಮಾರಕ ನಿರ್ಮಾಣ ಕುರಿತು ನಡೆದ ಪ್ರತಿಭಟನೆ ಯಲ್ಲಿ ಪ್ರತಿಭಟನಾಕಾರ ವಿರುದ್ಧ ಎರಡು ವರ್ಷಗಳ ನಂತರ ದಾಖಲಿಸಿರುವ ಪ್ರಕರಣ ರದ್ದು ಮಾಡುವಂತೆ ಒತ್ತಾಯಿಸಲಾಯಿತು
ಸಕಲೇಶಪುರ ದಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅರ್ಜನ ಸ್ಮಾರಕ ನಿರ್ಮಾಣ ಕುರಿತು ನಡೆದ ಪ್ರತಿಭಟನೆ ಯಲ್ಲಿ ಪ್ರತಿಭಟನಾಕಾರ ವಿರುದ್ಧ ಎರಡು ವರ್ಷಗಳ ನಂತರ ದಾಖಲಿಸಿರುವ ಪ್ರಕರಣ ರದ್ದು ಮಾಡುವಂತೆ ಒತ್ತಾಯಿಸಲಾಯಿತು   

ಸಕಲೇಶಪುರ: ‘ದಸರಾ ಅಂಬಾರಿ ಆನೆ ಅರ್ಜುನಗೆ ಸ್ಮಾರಕ ನಿರ್ಮಾಣ ಸಂಬಂಧ ಹೋರಾಟ ನಡೆಸಿದ ಚಳವಳಿಗಾರರ ವಿರುದ್ಧ ದಾಖಲಾಗಿರುವ ಎಲ್ಲ ಮೊಕದ್ದಮೆಗಳನ್ನು ತಕ್ಷಣವೇ ಹಿಂಪಡೆಯಬೇಕು. ಕಾಡಾನೆ–ಮಾನವ ಸಂಘರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು ಹಾಗೂ ಶ್ರೀಲಂಕಾ ಮಾದರಿಯಲ್ಲಿ ಆನೆಧಾಮವನ್ನು ಸರ್ಕಾರ ನಿರ್ಮಿಸಬೇಕು’ ಎಂಬ ಬೇಡಿಕೆಗಳೊಂದಿಗೆ ಸರ್ವಪಕ್ಷ–ಸರ್ವಸಂಘಟನೆಗಳ ಸಭೆ ಶುಕ್ರವಾರ ಇಲ್ಲಿ ನಡೆಯಿತು.

ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕಿನ ವಿವಿಧ ಸಂಘಟನೆಗಳ ಪ್ರಮುಖರು, ಹೋರಾಟಗಾರರು ಸಭೆಯಲ್ಲಿ ಪಾಲ್ಗೊಂಡು ಈ ಮೇಲಿನ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಂಡರು.

 ಪ್ರತಿನಿಧಿಗಳು ಡಿವೈಎಸ್‌ಪಿ ಕಚೇರಿಗೆ ತೆರಳಿ ಮಾಲತೇಶ ಅವರಿಗೆ ಮನವಿ ಸಲ್ಲಿಸಿದರು. ಚಳವಳಿಗಾರರ ವಿರುದ್ಧ ಪೂರ್ವಗ್ರಹ ಪೀಡಿತವಾಗಿ ಮೊಕದ್ದಮೆ ದಾಖಲಿಸಿರುವುದು ಸರಿಯಾದ ಕ್ರಮವಲ್ಲ,  ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಲು ಸಹಕರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ADVERTISEMENT

 ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾಹಿತಿ ನೀಡಿ, ‘ಕಾಡಾನೆ ಸಮಸ್ಯೆಯನ್ನು ಬಗೆಹರಿಸಲು ವಿಫಲವಾದ ಸರ್ಕಾರಗಳು, ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುವ ಚಳವಳಿಗಾರರನ್ನು ದಮನಿಸುವುದು ಸರಿಯಾದ ಬೆಳವಣಿಗೆ ಅಲ್ಲ. ನೈಜ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮುಂದಾಗಬೇಕು” ಎಂದರು.

‘ ಹೋರಾಟಗಾರರ ಮೇಲಿನ ದೌರ್ಜನ್ಯವನ್ನು ನೋಡುತ್ತಾ ಸುಮ್ಮನೆ ಕೂರುವುದು ಸಾಧ್ಯವಿಲ್ಲ. ಅಗತ್ಯವಾದರೆ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ. ಅದು ಫಲ ನೀಡದಿದ್ದರೆ ಹೋರಾಟದ ದಾರಿಯನ್ನೂ ಆಯ್ಕೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಮಲ್ನಾಡ್ ಮೆಹಬೂಬ್ ಮಾತನಾಡಿ , ‘ಅನ್ಯಾಯವನ್ನು ಪ್ರಶ್ನಿಸುವುದು, ಹೋರಾಟ ಮಾಡುವುದು ಪ್ರಜಾಪ್ರಭುತ್ವ ವಿಧಾನ. ಆದರೆ ಹೋರಾಟಗಳನ್ನು ಹತ್ತಿಕ್ಕಲು ಮೊಕದ್ದಮೆ ದಾಖಲಿಸುವುದು ವ್ಯವಸ್ಥೆಯನ್ನು ಕುರೂಪಗೊಳಿಸುವ ಕಾರ್ಯ.  ಕಾಡಾನೆ ಹೋರಾಟಗಾರರ ವಿರುದ್ಧವೂ ಈ ವಿಧಾನ ಬಳಸಲಾಗುತ್ತಿದೆ. ಇದು ವಿಷಾದನೀಯ’ ಎಂದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಮಾಜಿ ಅಧ್ಯಕ್ಷ ಜೈಮಾರುತಿ ದೇವರಾಜ್, ಮಲೆನಾಡು ಹೋರಾಟ ಸಮಿತಿ ಅಧ್ಯಕ್ಷ ಜಾನೇಕೆರೆ ಸಾಗರ್, ದಲಿತ ಹೋರಾಟಗಾರ ಲಕ್ಷ್ಮಣ್ ಕೀರ್ತಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ, ಕಮ್ಯುನಿಸ್ಟ್ ಪಕ್ಷದ ಮುಖಂಡ ಹರೀಶ್, ಪುರಸಭೆ ನಾಮನಿರ್ದೇಶಿತ ಸದಸ್ಯೆ ಬಿಲ್‌ಕಸ್ ರಾಣಿ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಉಪಾಧ್ಯಕ್ಷೆ ಸಾಯಿರಾಬಾನು, ನಿವೃತ್ತ ಪಿಡಿಒ ಕುಮಾರಯ್ಯ, ನಿವೃತ್ತ ಉಪಾಧ್ಯಾಯ ಲಕ್ಕಪ್ಪ ಮಾಸ್ಟರ್, ಜೆಡಿಎಸ್ ಮುಖಂಡ ಸಾಬಾ ಭಾಸ್ಕರ್, ಬೆಕ್ಕನಳ್ಳಿ ನಾಗರಾಜ್, ಪುರಸಭೆ ಮಾಜಿ ಅಧ್ಯಕ್ಷ ಕಾಡಪ್ಪ, ತಾಲ್ಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮೊಹಮ್ಮದ್ ಹನೀಫ್, ಆನೆಮಹಲ್ ಹಸೆನಾರ್, ಕಾಂಗ್ರೆಸ್ ಮುಖಂಡ ಸಣ್ಣಸ್ವಾಮಿ, ಬಿಜೆಪಿ ಮುಖಂಡ ಅಶ್ವಥ್, ಸಿಐಟಿಯು ನಾಯಕಿ ಸೌಮ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಬಿಜೆಪಿ ಮುಖಂಡ ಮಸವಳ್ಳಿ ಚಂದ್ರು,  ಹೋರಾಟಗಾರ ನಾರಾಯಣ ಆಳ್ವ, ಶಾನು, ಮಾದೇವಿ, ಮೋಹಿದ್ದಿನ್ ಶರೀಫ್  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.