
ಅರಸೀಕೆರೆ: ಮನುಷ್ಯನು ಅಹಂಕಾರವನ್ನು ಬದಿಗೊತ್ತಿ ದೇವರು ಹಾಗೂ ಧರ್ಮದ ನೆಲೆಯಲ್ಲಿ ಸಾಗಿದಾಗ ಮಾತ್ರ ನೆಮ್ಮದಿ– ಶಾಂತಿ ಲಭಿಸುತ್ತದೆ ಎಂದು ಶಾಸಕ ಕೆ. ಎಂ. ಶಿವಲಿಂಗೇಗೌಡ ಹೇಳಿದರು.
ಕಣಕಟ್ಟೆ ಹೋಬಳಿಯ ರಾಂಪುರ ಗ್ರಾಮದ ನಿರ್ವಹಣಾ ಸಿದ್ದೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ನಡೆದ 31ನೇ ವರ್ಷದ ಕಾರ್ತೀಕ ದೀಪೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಆಧುನಿಕತೆಯಿಂದಾಗಿ ಮನುಷ್ಯ ಸಂಸ್ಕೃತಿ ಹಾಗೂ ಸಂಸ್ಕಾರ ಮರೆಯಬಾರದು. ಗುರುಗಳ ಮಾರ್ಗದರ್ಶನ ಹಾಗೂ ಭಗವಂತನ ಆಶೀರ್ವಾದದಿಂದ ಏನಾದರು ಸಾಧನೆ ಮಾಡಬಹುದು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ ಎಂದರು.
ದೇವಸ್ಥಾನಗಳು ಹಾಗೂ ಮಠಗಳು ಶಾಂತಿ ನೆಮ್ಮದಿಯ ಕೇಂದ್ರಗಳಾಗಿದ್ದು, ಅರಸೀಕೆರೆ ಕ್ಷೇತ್ರದಲ್ಲಿ ನೂರಾರು ದೇವಾಲಯಗಳಿಗೆ ಅನುದಾನವನ್ನು ನೀಡಿ ಜೀರ್ಣೋದ್ಧಾರ ಮಾಡಲಾಗಿದೆ ಎಂದು ಹೇಳಿದರು.
ದೇವಾಲಯದ ಆವರಣ ಸಂಪೂರ್ಣ ಕಾಂಕ್ರೀಟಿಕರಣಗೊಳಿಸಿ ಹೈ ಮಾಸ್ಟ್ ಅಳವಡಿಸಲಾಗಿದೆ. ದೇವಾಲಯದ ಸಮೀಪದಲ್ಲೇ ಹೈಟೆಕ್ ಸಮುದಾಯ ಭವನಗಳನ್ನು ನಿರ್ಮಿಸಲು ಸಹಕಾರ ನೀಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಜನರ ಸೌಕರ್ಯಗಳಿಗಾಗಿ ಶ್ರಮಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಕೆಲಸ ಮಾಡುತ್ತೇನೆ ಎಂದರು.
ಬೂದಿಹಾಳ್ ವಿರಕ್ತಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮಾತನಾಡಿ, ಕತ್ತಲೆಯಿಂದ ಬೆಳಕಿನ ಕಡೆ ಸಾಗಬೇಕು ಎಂಬುದೇ ಈ ಕಾರ್ತೀಕ ದಿಪೋತ್ಸವದ ಅರ್ಥ. ಮನಸ್ಸಿನಲ್ಲಿರುವ ಕೆಟ್ಟ ಯೋಚನೆಗಳಿಂದ ದೂರವಿದ್ದು ಒಳ್ಳೆಯ ಆಲೋಚನೆ ಮಾಡಬೇಕು ಎಂದು ಹೇಳಿದರು.
ಮಾಡಾಳು ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ಮನುಷ್ಯ ಎಷ್ಟೇ ಸಂಪತ್ತು ಗಳಿಸಿದರು ಶಾಂತಿ ನೆಮ್ಮದಿಗಾಗಿ ಪರದಾಡುತಿರುತ್ತಾನೆ. ತಂದೆ ತಾಯಿ ಹಾಗೂ ಗುರುಗಳ ಮಾರ್ಗದರ್ಶನದಿಂದ ಮಾತ್ರ ನೆಮದ್ದಿ ಕಂಡುಕೊಳ್ಳಲು ಸಾಧ್ಯ ಎಂದು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಹೇಳಿದರು.
ದೇವಸ್ಥಾನದ ಹತ್ತಿರ ಹೈ ಮಾಸ್ಟ್ ಲೈಟ್ ಅನ್ನು ಶಾಸಕರು ಉದ್ಘಾಟಿಸಿದರು. ರಾಂಪುರ ಗ್ರಾಮದ ಮುಖಂಡರು, ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಇದ್ದರು.
ಸಂಸ್ಕೃತಿ ಸಂಸ್ಕಾರ ಮರೆಯದಿರಿ ಕೆಟ್ಟ ಯೋಚನೆಗಳಿಂದ ದೂರವಿರಿ ಗುರುಗಳ ಮಾರ್ಗದರ್ಶನ ಅಗತ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.