ADVERTISEMENT

ಅರಸೀಕೆರೆ | ಕೆಎಸ್‍ಆರ್‌ಟಿಸಿ ಬಸ್‌–ಕಾರು ಮುಖಾಮುಖಿ ಡಿಕ್ಕಿ: ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:06 IST
Last Updated 29 ಆಗಸ್ಟ್ 2025, 2:06 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಅರಸೀಕೆರೆ: ತಾಲ್ಲೂಕಿನ ರಾಮಸಾಗರ ಸಮೀಪ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕೆಎಸ್‍ಆರ್‌ಟಿಸಿ ಬಸ್‌ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ತರಿಕೆರೆಯ ಚೌಡಪ್ಪ (73) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ADVERTISEMENT

ಬುಧವಾರ ಬೆಳಗಿನ ಜಾವ 5 ಗಂಟೆಗೆ ಬೆಂಗಳೂರಿನಿಂದ ತರೀಕೆರೆಗೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಯೋಗೀಶ್, ನಿರಂಜನ್, ಮಧುಕುಮಾರ್, ಪೂರ್ಣಿಮಾ, ಗೌತಮಿ, ಚಿನ್ಮಯಿ, ಸುಮಲತಾ ಅವರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳವು

ಹಾಸನ: ನಗರದ ಚನ್ನಪಟ್ಟಣದಲ್ಲಿ ಮನೆಯ ಬೀಗ ಮುರಿದು ₹98 ಸಾವಿರ ಮೌಲ್ಯದ ಚಿನ್ನ ಹಾಗೂ ₹80 ಸಾವಿರ ನಗದು ಕಳವು ಮಾಡಲಾಗಿದೆ.

ಮಂಜುನಾಥ ಅವರು ಆ.26 ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ತಮ್ಮ ಗ್ರಾಮವಾದ ಮೂಡಲುಕೊಪ್ಪಲುಗೆ ಹೋಗಿದ್ದರು. ಆ.27 ರಂದು ಬೆಳಿಗ್ಗೆ ವಾಪಸ್ ಮನೆಗೆ ಬಂದು ನೋಡಿದಾಗ, ಬಾಗಿಲು ಒಡೆದಿತ್ತು. ರೂಮಿನ ಬೀರುವಿನಲ್ಲಿದ್ದ ₹ 98ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ. ಹಾಸನದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ

ಹಾಸನ: ಮೊಬೈಲ್ ಅಡಮಾನಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಸಣ್ಣ ವಿಷಯಕ್ಕೆ ಸ್ನೇಹಿತರೇ ಮತ್ತೊಬ್ಬ ಸ್ನೇಹಿತನನ್ನು ಮಂಗಳವಾರ ರಾತ್ರಿ ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಯರೇಹಳ್ಳಿ ಬಳಿಯ ದೇವರಾಯಪಟ್ಟಣದ ಅಂಕಿತ್ ಸಿ. (21) ಕೊಲೆಯಾದ ಯುವಕ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಮೊಹಮ್ಮದ್ ಸುಜೀತಾ, ಆರೋಪಿಗಳನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು 24 ಗಂಟೆಗಳಲ್ಲೇ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಮೂವರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿದ್ದಾರೆ.

ದೇವರಾಯಪಟ್ಟಣದ ಅಂಕಿತ್‌ನನ್ನು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅಂಕಿತ್ ತಂದೆ ಚಂದ್ರ ಅವರು, ನಂದ ಹಾಗೂ ಕೆಂಪ ಎಂಬುವವರ ವಿರುದ್ಧ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.