ಹಾಸನ: ಓಲಾ, ಊಬರ್, ರ‍್ಯಾಪಿಡೋ ನಿಷೇಧಿಸಬೇಕು. ಸಾರಿಗೆ ಇಲಾಖೆಯಲ್ಲಿ ಆಟೋ ಚಾಲಕರಿಗೆ ಪ್ರತ್ಯೇಕ ಸೇವಾ ಕೇಂದ್ರ ಆರಂಭಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ, ರಾಜ್ಯ ಆಟೋ ಚಾಲಕರ ಮಜ್ದೂರ್ ಸಂಘಗಳ ನೇತೃತ್ವದಲ್ಲಿ ನೂರಾರು ಆಟೋ ಚಾಲಕರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಕೆ. ದಿಲೀಪ್ ಕುಮಾರ್ ಮಾತನಾಡಿ, ಆಟೋ ಚಾಲಕರು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ್ದು, ಯಾವುದೇ ಸವಲತ್ತು ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಜೀವನೋಪಾಯಕ್ಕೆ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಅಪ್ಲಿಕೇಶನ್ ಮತ್ತು ಅಗ್ರಿಗೇಟರ್ ಹೆಸರಿನಲ್ಲಿ ನಮ್ಮನ್ನು ಹಾಗೂ ಸಾರ್ವಜನಿಕರನ್ನು ವಂಚಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಓಲಾ, ಊಬರ್, ರ‍್ಯಾಪಿಡೋ ಸೇರಿದಂತೆ ಇತರೆ ಅಗ್ರಿಗೇಟರ್‌ಗಳನ್ನು ನಿಷೇಧಿಸಬೇಕು ಎಂಬ ಆದೇಶವಿದೆ. ಆದರೆ, ಕೆಲ ಆಟೋ ಚಾಲಕರಿಗೆ ಹಣದ ಆಸೆ ತೋರಿಸಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಸಿ, ನಮ್ಮ ವಿರುದ್ಧವೇ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದಾರೆ. ಇದರಿಂದ ಆಟೋ ಚಾಲಕರ ನಡುವೆ ವೈಮನಸ್ಸು ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅಹಿತಕರ ಘಟನೆ ನಡೆದರೆ ಆ ಕಂಪನಿಗಳೇ ನೇರ ಹೊಣೆ ಆಗಬೇಕಾಗುತ್ತದೆ. ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಆಟೋ ಚಾಲಕರಿದ್ದು, ಜಿಲ್ಲೆಯ ಸಾರಿಗೆ ಇಲಾಖೆಯಲ್ಲಿ ಆಟೋ ಚಾಲಕರಿಗೆ ಪ್ರತ್ಯೇಕವಾಗಿ ಸೇವಾ ಕೇಂದ್ರ ತೆರೆದರೆ ಅನುಕೂಲವಾಗಲಿದೆ. ಇದಕ್ಕೆ ಆಟೋ ಮೀಟರ್ ಅಧಿಕಾರಿಯನ್ನು ಪ್ರತ್ಯೇಕವಾಗಿ ನೇಮಿಸಬೇಕು. ವಾರಕ್ಕೆ ಎರಡು ದಿನ ಸತ್ಯಮಾಪನ ಮುದ್ರೆ ಮಾಡುತ್ತಿದ್ದು, ಸಾವಿರಾರು ಆಟೋ ಚಾಲಕರು ಸೇವೆ ಒದಗಿಸಲು ತೊಂದರೆ ಆಗುತ್ತದೆ. ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಿ ಸಹಕರಿಸಬೇಕು. ಮಧ್ಯವರ್ತಿಗಳನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದರು.
ಈ ಪ್ರತಿಭಟನೆಗೆ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದು, ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಚೇತನ್, ಬಾಲು, ಸುನಿಲ್, ಹರೀಶ್, ಪರಮೇಶ್, ಅಶೋಕ್, ಆನಂದ್ ಸೇರಿದಂತೆ ಇತರರು ಭಾಗವಹಿಸಿದ್ದರು.
ನಗರದ ಪ್ರಮುಖ ಹೆದ್ದಾರಿ ಮತ್ತು ವೃತ್ತದಲ್ಲಿ ಮುಖ್ಯ ಆಟೋ ನಿಲ್ದಾಣಗಳ ಕೊರತೆ ಇದೆ. ಪ್ರಮುಖ ಆಟೋ ನಿಲ್ದಾಣಗಳ ನಿರ್ಮಾಣಕ್ಕೆ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು.ಜಾನಿ ಯಶ್ವಂತ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.