ADVERTISEMENT

ಹಾಸನ: ಬಗರ್ ಹುಕುಂ ಭೂಮಿ ಸರ್ವೆ, ಗಡಿ ಗುರುತಿಸಲು ಆಗ್ರಹ

ಕೆಪಿಆರ್‌ಎಸ್ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 14:03 IST
Last Updated 13 ಫೆಬ್ರುವರಿ 2024, 14:03 IST
ಹಾಸನದ ತಹಶೀಲ್ದಾರ್ ಕಚೇರಿ ಎದುರು ಕೆಪಿಆರ್‌ಎಸ್‌ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಹಾಸನದ ತಹಶೀಲ್ದಾರ್ ಕಚೇರಿ ಎದುರು ಕೆಪಿಆರ್‌ಎಸ್‌ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.   

ಹಾಸನ: ತಾಲ್ಲೂಕಿನ ಕಸಬಾ ಹೋಬಳಿ ಲಕ್ಷ್ಮಿಸಾಗರ ಗ್ರಾಮದ ಸರ್ವೆ ನಂಬರ್ 35 ರಲ್ಲಿ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸರ್ವೆ ಮಾಡಿ ಪೋಡಿ ಮಾಡಿಕೊಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ರೈತರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದ ಸರ್ವೆ ನಂಬರ್ 35 ರಲ್ಲಿ 26 ಕುಟುಂಬಗಳಿಗೆ ತಲಾ 0.26 ಎಕರೆ ಭೂಮಿಯನ್ನು 1977 ರ ಸಾಗುವಳಿ ಆಧಾರದಲ್ಲಿ ಮಂಜೂರು ಮಾಡಲಾಗಿದೆ. ಸಾಗುವಳಿ ಚೀಟಿಯನ್ನು ಸಹ ನೀಡಿದ್ದು, ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ಈ ಎಲ್ಲ ಕುಟುಂಬಗಳು ಭೂಮಿಯನ್ನು ಸಾಗುವಳಿ ಮಾಡುತ್ತ ಬೆಳೆ ಬೆಳೆದು ಸ್ವಾಧೀನದಲ್ಲಿ ಇರುತ್ತಾರೆ. ಪಹಣಿಗಳಲ್ಲೂ ಇವರ ಹೆಸರುಗಳು ಬರುತ್ತಿವೆ ಎಂದು ತಿಳಿಸಿದರು.

1997ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಹಾಸನದ ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ರೈತರು ಭೂಸ್ವಾಧೀನದಲ್ಲಿರುವ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡಿದ್ದಾರೆ ಎಂದು ತಿಳಿಸಿದರು.

ADVERTISEMENT

ಆದರೆ 26 ಕುಟುಂಬಗಳಿಗೆ ಮಂಜೂರಾಗಿದ್ದ ತಲಾ 0.26 ಎಕರೆ ಜಾಗದಲ್ಲಿ ಕೆಐಡಿಬಿಯವರು ಭೂಸ್ವಾಧೀನ ಮಾಡಿಕೊಂಡು ಉಳಿದಿರುವ ಭೂಮಿಯಲ್ಲಿ ರೈತರು ಈಗಲೂ ಅನುಭವದಲ್ಲಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರೈತರು ಈಗಾಗಲೇ ಅನುಭವದಲ್ಲಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಉಳಿಕೆ ಭೂಮಿಯನ್ನು ಸರ್ವೆ ಮಾಡಿ ಗಡಿಗಳನ್ನು ಗುರುತಿಸಿ, ಹದ್ದುಬಸ್ತು ಮೂಲಕ ಪೋಡಿ ಮಾಡಬೇಕು ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ನವೀನ್ ಕುಮಾರ್, ದಲಿತ ಹಕ್ಕುಗಳ ಸಮಿತಿ ಮತ್ತು ಡಿವೈಎಫ್ಐ ಮುಖಂಡ ಪೃಥ್ವಿ ಎಂ.ಜಿ., ಸಿಐಟಿಯು ಕಾರ್ಯದರ್ಶಿ ಅರವಿಂದ, ಲಕ್ಷ್ಮೀ ಸಾಗರ ಗ್ರಾಮಸ್ಥರಾದ ಜಯಲಕ್ಷ್ಮಿ, ರಾಜೇಶ್, ಶ್ರೀನಿವಾಸ್, ಜಯಮ್ಮ, ಮೂರ್ತಿ, ಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.