ADVERTISEMENT

ದೊಡ್ಡಕೆರೆ ಉದ್ಯಾನಕ್ಕೆ ಬೈಕೆರೆ ನಾಗೇಶ್ ಹೆಸರು: ಶಾಸಕ ಸಿಮೆಂಟ್ ಮಂಜು

ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ: ಶಾಸಕ ಸಿಮೆಂಟ್ ಮಂಜು 

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 4:23 IST
Last Updated 12 ಫೆಬ್ರುವರಿ 2026, 4:23 IST
ಸಕಲೇಶಪುರ ತಾಲ್ಲೂಕಿನ ಬಿರಡಹಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡನಾಗರ ಮುಖ್ಯರಸ್ತೆಯಿಂದ ಬೈಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ  ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ ಮಾಡಿದರು
ಸಕಲೇಶಪುರ ತಾಲ್ಲೂಕಿನ ಬಿರಡಹಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡನಾಗರ ಮುಖ್ಯರಸ್ತೆಯಿಂದ ಬೈಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ  ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ ಮಾಡಿದರು   

ಸಕಲೇಶಪುರ: ಜನರು ನೀಡಿರುವ ಅಧಿಕಾರವನ್ನು ಬಳಸಿ ಜನಪರ ಹಾಗೂ ಅಭಿವೃದ್ಧಿ ಕಾರ್ಯ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.

ತಾಲ್ಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡನಾಗರ ಮುಖ್ಯರಸ್ತೆಯಿಂದ ಬೈಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 1,825 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ಮಾಡಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯಾಧಿಕಾರಿಯಾಗಿ,  ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಕಚೇರಿಯೂ ಸೇರಿದಂತೆ ಕೇಂದ್ರದ ವಿವಿಧ ಮಂತ್ರಾಲಯಗಳಲ್ಲಿ ನಿರ್ದೇಶಕ ಶ್ರೇಣಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ದಿವಂಗತ ಬೈಕೆರೆ ನಾಗೇಶ್ ಅವರ ಕನಸಿನ ಯೋಜನೆ ಇದಾಗಿದೆ. ಜನಪ್ರತಿನಿಧಿಗಳು ಮಾಡಬೇಕಾದ ಅನೇಕ ಕೆಲಸಗಳನ್ನು ಅಧಿಕಾರಿಯಾಗಿಯೇ ಅವರು ತಾಲ್ಲೂಕಿಗೆ ಮಾಡಿಕೊಟ್ಟಿದ್ದಾರೆ. ಬೈಕೆರೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಸ್ಮರಿಸಿದರು.

ADVERTISEMENT

ಬೈಕೆರೆ ನಾಗೇಶ್ ಜೀವನಾವಧಿಯಲ್ಲಿ ಕಂಡಿದ್ದ ಈ ರಸ್ತೆ ನಿರ್ಮಾಣದ ಕನಸು ನನ್ನ ಅಧಿಕಾರಾವಧಿಯಲ್ಲಿ ಸಾಕಾರವಾಗುತ್ತಿರುವುದು ಸಂತೋಷದ ಸಂಗತಿ. ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ಈ ರಸ್ತೆ ಕಾಮಗಾರಿ ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ಅವರ ಸ್ಮರಣಾರ್ಥವಾಗಿ ಸುಮಾರು ₹1.70 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.

ಶಾಸಕನಾದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ₹500 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ಈವರೆಗೆ ₹72 ಕೋಟಿ ಬಿಡುಗಡೆಯಾಗಿದೆ. ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ ಪರಿಸರಕ್ಕೆ ಹಾನಿ ಉಂಟಾದರೂ, ಬಯಲು ಪ್ರದೇಶಗಳ ಜನತೆಗೆ ಕುಡಿಯುವ ನೀರು ಒದಗಿಸಲು ನಮ್ಮ ಕ್ಷೇತ್ರದ ಜನರು ಸಹಕಾರ ನೀಡಿದ್ದಾರೆ. ಈ ಯೋಜನೆಯಿಂದ ಏಳು ಜಿಲ್ಲೆಗಳ ಸುಮಾರು 70 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದರು.

ನಾನು ಶಾಸಕನಾದ ನಂತರ ಕ್ಷೇತ್ರದ ಅಭಿವೃದ್ಧಿಗೆ ಸುಮಾರು ₹110 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತಂದಿದ್ದೇನೆ. ಅಧಿಕಾರಿಗಳು ಜನಸಾಮಾನ್ಯರಿಗೆ ಗೌರವ ನೀಡಿ, ತಮ್ಮ ಹುದ್ದೆಯ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

ಕಡಬನಹಳ್ಳಿಯಿಂದ ಕೆಲಗಳಲೆವರೆಗೆ ರಸ್ತೆ ಅಭಿವೃದ್ಧಿಗೆ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು. ಪಟ್ಟಣದಲ್ಲಿ ಬೈಕೆರೆ ನಾಗೇಶ್ ನಿರ್ಮಿಸಿದ್ದ ಉದ್ಯಾನವನ್ನು ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಅದಕ್ಕೆ ‘ಬೈಕೆರೆ ನಾಗೇಶ್ ಉದ್ಯಾನವನ’ ಎಂದು ಹೆಸರಿಡಲಾಗುವುದು ಎಂದರು.

ಸುಗುಣ ನಾಗೇಶ್, ಬಿರಡಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಶೇಖರ್, ಎತ್ತಿನಹೊಳೆ ಯೋಜನೆಯ ಎಂಜಿನಿಯರ್ ಪ್ರಮೋದ್, ಬಿಜೆಪಿ ಮುಖಂಡ ಅಗ್ನಿ ಸೋಮಶೇಖರ್, ನಿಖಿಲ್ ಹಲಸುಲಿಗೆ, ಯಶವಂತ್, ಜೀವನ್, ಷಣ್ಮುಖ, ಜಯರಾಜ್, ಗುತ್ತಿಗೆದಾರ ಸುರೇಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.