ಹಳೇಬೀಡು: ಉಡಸಲಮ್ಮ ಹಾಗೂ ಕರಿಯಮ್ಮ ದೇವಿ ಜಾತ್ರೆಯ ಮೂರನೇ ದಿನವಾದ ಗುರುವಾರ ಬಸ್ತಿಹಳ್ಳಿ ಗ್ರಾಮದಲ್ಲಿ ಕರಿಯಮ್ಮ ದೇವಿ ಕಲ್ಯಾಣ ಮಹೋತ್ಸವ ಸಂಭ್ರಮದಿಂದ ನೆರವೇರಿತು.
ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಯೊಂದಿಗೆ ನಡೆದ ದೇವಿಯ ವಿವಾಹ ಮಹೋತ್ಸವ ವರ್ಣರಂಜಿತವಾಗಿತ್ತು.
ಬಸ್ತಿಹಳ್ಳಿ ಗ್ರಾಮಸ್ಥರು ಮಂಗಳ ವಾದ್ಯದೊಂದಿಗೆ ಕರಿಯಮ್ಮ ಹಾಗೂ ಪರಿವಾರ ದೇವತೆಗಳನ್ನು ಸಂಭ್ರಮದಿಂದ ಕರೆ ತಂದರು. ದೇವಿಗೆ ವಿವಾಹ ಮಹೋತ್ಸವ ನಡೆಸುವ ವಿಶೇಷ ಆಚರಣೆಯಲ್ಲಿ ಬಸ್ತಿಹಳ್ಳಿ ಗ್ರಾಮಸ್ಥರು ಮಾತ್ರವಲ್ಲದೇ ವಿವಿಧ ಊರಿನ ಸಂಬಂಧಿಕರು ಬಂದಿದ್ದರು. ದೇವರ ಉತ್ಸವದ ಜೊತೆ ನಡೆಯುವ ವಿವಾಹ ಮಹೋತ್ಸವದಿಂದಾಗಿ ಸಂಭ್ರಮ ಇಮ್ಮಡಿಗೊಂಡಿತ್ತು. ಪುರೋಹಿತರ ಮಂತ್ರಘೋಷದ ಜೊತೆಯಲ್ಲಿ ಸಾಂಪ್ರದಾಯಿಕ ಸೋಬಾನದ ಹಾಡು ಕೇಳಿ ಬಂದವು. ಭಕ್ತಿಭಾವದಿಂದ ವಿವಾಹ ವೀಕ್ಷಿಸಿದರು.
ಮದುವಣಗಿತ್ತಿ ಶಾಸ್ತ್ರ ಪೂಜಾ ವಿಧಾನದೊಂದಿಗೆ ನೆರವೇರಿತು. ಹಳದಿ ಶಾಸ್ತ್ರಿ, ಮೆಹಂದಿ ಶಾಸ್ತ್ರ, ಧಾರೆ ಮೂಹೂರ್ತ ಸಂದರ್ಭದಲ್ಲಿ ವಾದ್ಯಮೇಳ ಮುಗಿಲು ಮುಟ್ಟುವಂತೆ ಕೇಳಿ ಬಂತು. ದೇವಿಗೆ ಜೈಕಾರ ಹಾಕಿ ಭಕ್ತರು ಸಂಭ್ರಮಿಸಿದರು.
ತಮ್ಮ ಮಕ್ಕಳಿಗೆ ವಿವಾಹ ಭಾಗ್ಯ ಕರುಣಿಸು ಎಂದು ವಯಸ್ಸಿಗೆ ಬಂದ ಮಕ್ಕಳ ಪೋಷಕರು ದೇವಿಯನ್ನು ಪ್ರಾರ್ಥಿಸಿದರು. ದೇವಿಯ ಕಲ್ಯಾಣ ಮಹೋತ್ಸವ ಸಂಪ್ರದಾಯದಂತೆ ಭಕ್ತರು ಮನಮುಟ್ಟುವಂತೆ ನಡೆಯಿತು. ಆದರೆ ವರ ಯಾರು ಎಂಬ ಮಾಹಿತಿ ನಿಗೂಢವಾಗಿ ಉಳಿಯಿತು.
‘ನೂರಾರು ವರ್ಷದ ಇತಿಹಾಸ ಹೊಂದಿರುವ ದೇವಿ ವಿವಾಹದಲ್ಲಿ ಬೇಡ ಜಂಗಮ ಆರಾಧ್ಯರು, ಪೌರೋಹಿತ್ಯ ನಡೆಸುತ್ತಾರೆ. ಕುಂಬಾರ ಸಮಾಜದವರು ಬಾಸಿಂಗ ಸಮರ್ಪಿಸುತ್ತಾರೆ’ ಎಂದು ಗ್ರಾಮದ ಮಹೇಶ ಹೇಳಿದರು.
ಕರಿಯಮ್ಮ ದೇವಿಯನ್ನು ಸಂಭ್ರಮದಿಂದ ಕರೆ ತಂದ ಗ್ರಾಮಸ್ಥರು ಮದುವೆ ಚಪ್ಪರದಲ್ಲಿ ಮೊಳಗಿದ ಮಂತ್ರಘೋಷ, ಸೋಬಾನೆ ಹಾಡು ಮಕ್ಕಳಿಗೆ ವಿವಾಹ ಭಾಗ್ಯ ಕರುಣಿಸಿ ಎಂದು ಪ್ರಾರ್ಥಿಸಿದ ಪೋಷಕರು
ತಾತ ಮುತ್ತಾತನ ಕಾಲದಿಂದಲೂ ಗ್ರಾಮಸ್ಥರ ಸಹಕಾರದಿಂದ ನಮ್ಮ ಮನೆಯಿಂದ ದೇವಿ ವಿವಾಹ ನಡೆಸಿಕೊಂಡು ಬಂದಿದ್ದೇವೆ. ದೇವಿ ತವರು ಮನೆಯ ಜವಾಬ್ದಾರಿ ಹೆಮ್ಮೆ ಎನಿಸಿದೆಗಣೇಶ್ ಬಸ್ತಿಹಳ್ಳಿ ಗ್ರಾಮಸ್ಥ
ವಯಸ್ಸಿಗೆ ಬಂದ ಮಕ್ಕಳಿಗೆ ಕಂಕಣ ಭಾಗ್ಯ ದೊರಕಲಿ. ಗ್ರಾಮಗಳು ಸಮೃದ್ಧಿಯಾಗಲಿ ಎಂದು ದೇವಿಯ ಕಲ್ಯಾಣ ಮಹೋತ್ಸವ ನಡೆಸುವ ಸಂಪ್ರದಾಯ ಹಿಂದಿನಿಂದ ನಡೆದು ಬಂದಿದೆಪ್ರಮೋದ್ ಆರಾಧ್ಯ ಪುರೋಹಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.