ಬೇಲೂರು: ಇಲ್ಲಿನ ಚನ್ನಕೇಶವ ಸ್ವಾಮಿಯ ದಿವ್ಯ ಬ್ರಹ್ಮರಥೋತ್ಸವ ಗುರುವಾರ ನಡೆಯಲಿದ್ದು, ಶುಕ್ರವಾರ ನಾಡಿನ ದಿವ್ಯರಥೋತ್ಸವ ಜರುಗಲಿದೆ. ಶಾಸಕ ಎಚ್.ಕೆ.ಸುರೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ನೇತೃತ್ವದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಯಾವುದೇ ಲೋಪಗಳು ಆಗದಂತೆ ನಿಗಾ ವಹಿಸಲಾಗಿದೆ.
ಪಟ್ಟಣ ಪ್ರಮುಖ ಬೀದಿ, ರಸ್ತೆಗಳು ಹಾಗೂ ಚನ್ನಕೇಶವ ದೇಗುಲಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಜೊತೆಗೆ ದೇಗುಲಕ್ಕೆ ಆಕರ್ಷಕ ಹೂವಿನ ಅಲಂಕಾರ ಮಾಡಲಾಗಿದೆ. ರಥವನ್ನೂ ಸಿದ್ಧಗೊಳಿಸಲಾಗಿದೆ.
ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಮುಂದಾಳತ್ವದಲ್ಲಿ ಪಟ್ಟಣದಲ್ಲಿ ಏಳು ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ಭಕ್ತಾಧಿಗಳು ತಂಗಲು ದೇಗುಲದ ಹಿಂಭಾಗದಲ್ಲಿ ಶಾಮಿಯಾನ ಹಾಕಿಸಿ, ನೆಲಕ್ಕೆ ಮ್ಯಾಟ್ ಹಾಕಿಸಿ ವ್ಯವಸ್ಥೆ ಮಾಡಲಾಗಿದೆ.
ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಶುದ್ಧ ಮಾಡಲಾಗಿದ್ದು, ಸ್ನಾನಘಟ್ಟ ಹಾಗೂ ಮಹಿಳೆಯರು ಉಡುಪು ಬದಲಾವಣೆ ಗೃಹಗಳನ್ನು ನಿರ್ಮಿಸಲಾಗಿದೆ. ವಿವಿಧ ಕಡೆಗಳಲ್ಲಿ ಮೊಬೈಲ್ ಶೌಚಾಲಯಗಳನ್ನು ಹಾಕಲಾಗಿದೆ. ಕುಡಿಯುವ ನೀರು, ನೆರಳು ಸೇರಿದಂತೆ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.
‘ಕೆಂಪೇಗೌಡ ವೃತ್ತದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಅಂದವಾದ ಸ್ವಾಗತ ಕಮಾನು ನಿರ್ಮಿಸಲಾಗಿದೆ. ವಿಶೇಷ ದರ್ಶನಕ್ಕೆ ₹200ಟಿಕೆಟ್ ನಿಗದಿ ಪಡಿಸಲಾಗಿದ್ದು, ಸಾಮಾನ್ಯ ದರ್ಶನ ಮತ್ತು ವಿಐಪಿ ದರ್ಶನಕ್ಕೆ ತೊಂದರೆ ಆಗದಂತೆ ಶಿಷ್ಟಾಚಾರ ಸಿಬ್ಬಂದಿ ನೇಮಿಸಲಾಗಿದೆ. ಪ್ರತಿ ಇಲಾಖೆಯ ಅಧಿಕಾರಿಗಳು ಮತ್ತು ನೌಕರರನ್ನು ಬಳಸಿಕೊಂಡು ಯಾವುದೇ ಸಮಸ್ಯೆ ಆಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ, ದೇಗುಲದ ಆಡಳಿತಾಧಿಕಾರಿ ಕೆ.ಟಿ. ಶಾಂತಲಾ ತಿಳಿಸಿದರು.
‘ಬಂದೋಬಸ್ತ್‌ಗಾಗಿ ಸುಮಾರು 300 ಪೊಲೀಸ್‌ಗಳನ್ನು ಬಳಸಲಾಗುತ್ತಿದ್ದು, 28 ಕಡೆ ಸಿಸಿಟಿವಿ ಕ್ಯಾಮೆರಾ ಹಾಕಲಾಗಿದ್ದು, ಪಟ್ಟಣದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ’ ಎಂದು ಪೊಲೀಸ್ ಇನ್ಸ್ ಪೆಕ್ಟರ್ ರೇವಣ್ಣ ತಿಳಿಸಿದರು.
‘ರಥ ಸಾಗುವ ನಾಲ್ಕು ಹಾಗೂ ಉತ್ಸವಗಳು ಸಾಗುವ ಎಂಟು ಬೀದಿಗಳಲ್ಲಿ ಸುಗಮ ಸಂಚಾರಕ್ಕಾಗಿ ವಾಹನಗಳ ಪಾರ್ಕಿಂಗ್ ಹಾಗೂ ಜಾತ್ರೆ ಸಮಯದಲ್ಲಿ ಹಾಕುವ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ’ ಎಂದು ಹೇಳಿದರು.
‘ಹೊರಭಾಗದಿಂದ ಬಂದ ಭಕ್ತಾದಿಗಳಿಗೆ ಉಳಿಯಲು ಪಟ್ಟಣದ ಕಲ್ಯಾಣ ಮಂಟಪಗಳನ್ನು ಬಿಡಿಸಿಕೊಳ್ಳಲಾಗಿದೆ. ಜಾತ್ರೆಯನ್ನು ವಿಜೃಂಭಣೆಯಿಂದ ಮಾಡಲು ಮುದ್ದಾಗಿದ್ದು, ಸಿಕ್ಕಿರುವ ಅವಕಾಶ ಬಳಸಿಕೊಂಡು ಸೇವಕನಾಗಿ ಭಗವಂತನ ಸೇವೆ ಮಾಡುತ್ತಿದ್ದೇನೆ. ಪುರಸಭೆ ಆಡಳಿತವು ಜಾತ್ರೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ’ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ವಿಷ್ಣುವರ್ಧನನ ಕಾಲದಿಂದಲೂ ಬಳ್ಳೂರು ಗ್ರಾಮಕ್ಕೂ ಚನ್ನಕೇಶವ ದೇಗುಲಕ್ಕೂ ಅವಿನಾಭಾವ ಸಂಬಂಧವಿದೆ. ಯದ್ನಮರಗಾರರೂ ಉತ್ತಮ ಸೇವೆ ನೀಡುತ್ತಿದ್ದಾರೆ.–ಬಳ್ಳೂರು ಉಮೇಶ್, ಸಾಲುಮರದ ತಿಮ್ಮಕ್ಕ ಫೌಂಡೇಷನ್ ಅಧ್ಯಕ್ಷ
ಚನ್ನಕೇಶವ ಸ್ವಾಮಿ ಜಾತ್ರೆಗೆ ಭವ್ಯ ಪರಂಪರೆ ಇದ್ದು ಜಿಲ್ಲೆಯ ಭಕ್ತಿ ಮತ್ತು ಶಿಲ್ಪಕಲೆಯ ಬೀಡಾಗಿದೆ. ದೇವರು ತಾಲ್ಲೂಕಿನ ಹಾಗೂ ನಾಡಿನ ಜನತೆಗೆ ಒಳಿತನ್ನು ಮಾಡಲಿ.–ಬಿಕ್ಕೋಡು ಚೇತನ್ ಸಿ. ಗೌಡ ಕೆಡಿಪಿ ಸದಸ್ಯ
‘ದೇಗುಲದ ಆವರಣದಲ್ಲಿ ವಂದನೆ’
‘ಬ್ರಹ್ಮರಥೋತ್ಸವದಂದು ದೊಡ್ಡಮೆದೂರಿನ ಖಾಜಿಯವರು ದೇಗುಲದ ಆವರಣದಲ್ಲಿ ಚನ್ನಕೇಶವನಿಗೆ ಉರ್ದುಭಾಷೆಯಲ್ಲಿ ವಂದನೆ ಸಲ್ಲಿಸುವ ವಾಡಿಕೆ ಇರುವ ಬಗ್ಗೆ ದೇಗುಲದ ಕೈಪಿಡಿಯಲ್ಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸಹ ದೇಗುಲದ ಆವರಣದಲ್ಲಿ ವಂದನೆ ಸಲ್ಲಿಸಲಾಗುತ್ತದೆ’ ಎಂದು ದೊಡ್ಡಮೆದೂರಿನ ಖಾಜಿ ಸೈಯದ್ ಸಜ್ಜಾದ್ ಬಾಷಾ ಖಾದ್ರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.