ADVERTISEMENT

ಬೇಲೂರು: ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮುಖಂಡರ ಮಧ್ಯೆ ವಾಗ್ವಾದ

ಕಾಮಗಾರಿ ವೀಕ್ಷಿಸಲು ಬಂದ ಎಐಸಿಸಿ ಸದಸ್ಯ ಬಿ. ಶಿವರಾಂ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 3:22 IST
Last Updated 14 ಫೆಬ್ರುವರಿ 2026, 3:22 IST
ಬೇಲೂರಿನ ವೈಕುಂಠ ಬೀದಿಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಲು ಎಐಸಿಸಿ ಸದಸ್ಯ ಬಿ.ಶಿವರಾಂ ಹಾಗೂ ಕಾಂಗ್ರೆಸ್ ಮುಖಂಡರು ತೆರಳಿದ ಸಂದರ್ಭದಲ್ಲಿ ಪುರಸಭೆ ಸದಸ್ಯ ಜಗದೀಶ್ ಹಾಗೂ ಬಿಜೆಪಿ ಮುಖಂಡ ಶ್ರೀನಿವಾಸ್ ಜೊತೆ ಮಾತಿನ ಚಕಮಕಿ ನಡೆಯಿತು.
ಬೇಲೂರಿನ ವೈಕುಂಠ ಬೀದಿಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಲು ಎಐಸಿಸಿ ಸದಸ್ಯ ಬಿ.ಶಿವರಾಂ ಹಾಗೂ ಕಾಂಗ್ರೆಸ್ ಮುಖಂಡರು ತೆರಳಿದ ಸಂದರ್ಭದಲ್ಲಿ ಪುರಸಭೆ ಸದಸ್ಯ ಜಗದೀಶ್ ಹಾಗೂ ಬಿಜೆಪಿ ಮುಖಂಡ ಶ್ರೀನಿವಾಸ್ ಜೊತೆ ಮಾತಿನ ಚಕಮಕಿ ನಡೆಯಿತು.   

ಬೇಲೂರು: ಇಲ್ಲಿನ ವೈಕುಂಠಬೀದಿಯಲ್ಲಿ ನಡೆಯುತ್ತಿರುವ ಚರಂಡಿ, ರಸ್ತೆ ಕಾಮಗಾರಿಯನ್ನು ಎಐಸಿಸಿ ಸದಸ್ಯ ಬಿ.ಶಿವರಾಂ ಶುಕ್ರವಾರ ವೀಕ್ಷಿಸಲು ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿ.ಶಿವರಾಂ, ಕೆಡಿಪಿ ಸದಸ್ಯ ಬಿಕ್ಕೋಡು ಚೇತನ್, ಬಗರ್ ಹುಕುಂ ಸಮಿತಿ ಸದಸ್ಯರಾದ ಪ್ರದೀಪ್, ವಿರೂಪಾಕ್ಷ, ಕಾಂಗ್ರೆಸ್ ಮುಖಂಡ ಬಿಕ್ಕೋಡು ಹೇಮಂತ್ ಕುಮಾರ್ ಕಾಮಗಾರಿ ವೀಕ್ಷಿಸುತ್ತಿದ್ದರು. ಈ ವೇಳೆ 9ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಜಗದೀಶ್, ಬಿಜೆಪಿ ಮುಖಂಡ ಕೋಟೆ ಶ್ರೀನಿವಾಸ್, ವಿನಯ್, ಇತರರು ಬಂದರು. ‘ನೀವು ಸುಮ್ಮನೆ ಬಂದು ಮಾಡುವ ಕೆಲಸಕ್ಕೆ ತೊಂದರೆ ಕೊಡುತ್ತಿದ್ದೀರಾ. ಅವರು ನೀಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ದೇವರು ಓಡಾಡುವ ರಸ್ತೆ. ನಿಮಗೆ ಒಳ್ಳೆಯದಾಗುವುದಿಲ್ಲ’ ಎಂದು ಪ್ರದೀಪ್ ಜೊತೆ ವಾಗ್ವಾದಕ್ಕೆ ಇಳಿದರು.

ಸ್ಥಳಕ್ಕೆ ಬಂದ ಅದೇ ಬೀದಿಯ ಪಿ.ಟಿ.ಸೋಮೇಗೌಡ, ‘40ಎಂ.ಎಂ. ಜೆಲ್ಲಿ ಬಳಸಿಲ್ಲ. ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದರು. ಈ ವೇಳೆ ಪುರಸಭೆ ಸದಸ್ಯ ಜಗದೀಶ್, ‘ನೀವು ಗುತ್ತಿಗೆದಾರರಾಗಿದ್ದು ಹೀಗೆ ಮಾತನಾಡಬಾರದು’ ಎಂದು ಸೋಮೇಗೌಡರ ಜೊತೆ ವಾಗ್ವಾದಕ್ಕೆ ಇಳಿದರು. ಅಲ್ಲಿಂದ ವೈಕುಂಠಬೀದಿಯ ನಿವಾಸಿಗಳು, ‘ನಮ್ಮ ಬೀದಿಯ ಕೆಲಸ ನಡೆಯುತ್ತಿದೆ. ಸುಖಾಸುಮ್ಮನೆ ಬಂದು ತೊಂದರೆ ಕೊಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಎಐಸಿಸಿ ಸದಸ್ಯ ಬಿ.ಶಿವರಾಂ ಮಾತನಾಡಿ, ‘ನಾವು ಕೆಲಸ ನಿಲ್ಲಿಸಲು ಬಂದಿಲ್ಲ. ಚರಂಡಿ ಬಾಕ್ಸ್‌ಗೆ ಒಂದು ಮೀಟರ್‌ಗೆ 8 ಕೆ.ಜಿ. ಕಬ್ಬಿಣ ಬಳಸಬೇಕು. ಅದನ್ನು ಬಳಸಿಲ್ಲ. ಆರು ಇಂಚು ದಪ್ಪ ಇರಬೇಕು. ಆದರೆ ನಾಲ್ಕು ಇಂಚು ಇದೆ. ಇದನ್ನು ಎಂಜಿನಿಯರ್ ರಮೇಶ್ ಒಪ್ಪಿಕೊಂಡಿದ್ದು, ಉಳಿದರೆ ಮುಂದಕ್ಕೆ ಕೆಲಸ ಮಾಡುತ್ತೇವೆ ಎನ್ನುತ್ತಿದ್ದಾರೆ. ಕಾಮಗಾರಿ ಗುಣಮಟ್ಟದಲ್ಲಿ ಇಲ್ಲದೇ ಮುಂದಕ್ಕೆ ಎಲ್ಲಿ ಮಾಡುತ್ತಾರೆ? ಕ್ರಿಯಾಯೋಜನೆಯಲ್ಲಿ ಎಷ್ಟಿರುತ್ತೋ ಅಷ್ಟೇ ತಾನೆ ಮಾಡೋದು’ ಎಂದರು.

ಪುರಸಭೆ ಸದಸ್ಯ ಜಗದೀಶ್ ಮಾತನಾಡಿ, ‘ಆಶ್ರಯ ಯೋಜನೆಯಲ್ಲಿ ನಿವೇಶನ ವಿತರಿಸಲು ಶಾಸಕರು ಮುಂದಾಗಿರುವ ಹಿನ್ನಲೆಯಲ್ಲಿ ಹೊಟ್ಟೆ ಕಿಚ್ಚಿನಿಂದ ಬಂದು ಕಾಮಗಾರಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇವರದ್ದೇ ಸರ್ಕಾರ ಇದೆ. ಪಟ್ಟಣಕ್ಕೆ ಅನುದಾನ ತಂದು ಕೆಲಸ ಮಾಡಿಸಲಿ. ಅದನ್ನು ಬಿಟ್ಟು ಅಗುವ ಕೆಲಸದಲ್ಲಿ ರಾಜಕೀಯ ಮಾಡಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಕೋಟೆ ಶ್ರೀನಿವಾಸ್ ಮಾತನಾಡಿ, ದೇಗುಲದ ನವರಾತ್ರಿ ಮಂಟಪ ಬೀಳುವ ಹಂತದಲ್ಲಿದೆ. ಈ ಬಗ್ಗೆ ಗಮನ ಹರಿಸಿ ಎಂದು ಬಿ.ಶಿವರಾಂ ಬಳಿ ಕೇಳಿಕೊಂಡರು.

ಪುರಸಭೆ ವ್ಯಾಪ್ತಿಯಲ್ಲಿ ₹7.5 ಕೋಟಿ ವೆಚ್ಚದ ಕೆಲಸ ನಡೆಯುತ್ತಿದ್ದು ಪುರಸಭೆ ಎಂಜಿನಿಯರಿಂಗ್ ವಿಭಾಗ ಯಾವುದೇ ಕಾಮಗಾರಿ ವೀಕ್ಷಣೆ ಮಾಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು
ಬಿ.ಶಿವರಾಂ ಎಐಸಿಸಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.