
ಬೇಲೂರು: ಇಲ್ಲಿನ ಗೆಂಡೇಹಳ್ಳಿ ರಸ್ತೆಯನ್ನು ದುರಸ್ತಿಪಡಿಸುವಂತೆ ಆಗ್ರಹಿಸಿ ಸ್ಥಳೀಯ ನಾಗರಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸರ್ವೊದಯ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ, ‘ಗೆಂಡೇಹಳ್ಳಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದರೂ ಶಾಸಕ ಎಚ್.ಕೆ.ಸುರೇಶ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಬೇಲೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಬಿಕ್ಕೋಡು, ಹಳೇಬೀಡು, ಚಿಕ್ಕನಹಳ್ಳಿ, ಹಾಸನ, ಚಿಕ್ಕಮಗಳೂರು ರಸ್ತೆಗಳಿಗೆ ಕೊಡುವ ಪ್ರಾಧಾನ್ಯತೆಯನ್ನು ಗೆಂಡೇಹಳ್ಳಿ ರಸ್ತೆಗೆ ಕೊಡದೇ ಯಾವಾಗಲೂ ತಾರತಾಮ್ಯ ಮಾಡಲಾಗುತ್ತಿದೆ. ಈ ರಸ್ತೆಯಲ್ಲಿ ಓಡಾಡುತ್ತಿರುವವರು ಜೀವವನ್ನು ಕೈಲಿಡಿದ್ದು ಸಂಚರಿಸಬೇಕಿದೆ. ಈ ರಸ್ತೆ ಅಭಿವೃದ್ಧಿಗೆ ಅನುದಾನ ಬಂದಿದ್ದು ಎಂದು ಹೇಳಲಾಗುತ್ತಿದ್ದು, ಶ್ರೀಘ್ರವಾಗಿ ರಸ್ತೆ ಅಭಿವೃದ್ದಿಗೊಳಿಸಿ ಅಥವಾ ಗುಂಡಿಗಳನ್ನಾದರೂ ಮುಚ್ಚಲು ಕ್ರಮಕೈಗೊಳ್ಳಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆನಡೆಸಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.
ಸ್ಥಳೀಯರಾದ ಮೆಹಬೂಬ್, ವಿನಯ್, ಮಂಜುನಾಥ್, ಮನು, ನಾಗೇಶ್, ರಘು, ಪ್ರತಾಪ್, ನಾಗೇಶ್ ಗೌಡ, ಹೊನ್ನೇಗೌಡ, ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.