
ಬೇಲೂರು: ಪಟ್ಟಣದ ಚನ್ನಕೇಶವ ನಗರದಲ್ಲಿ ಪಡಿತರ ವಿತರಣಾ ಉಪ ಕೇಂದ್ರವನ್ನು ಪ್ರಾರಂಭಿಸಿದ್ದು, ಮನೆ ಬಾಗಿಲಿಗೆ ಅಕ್ಕಿ ತಲುಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.
ಪುರಸಭೆ ವ್ಯಾಪ್ತಿಯ 8ನೇ ವಾರ್ಡ್‌ನ ಚನ್ನಕೇಶವ ನಗರದಲ್ಲಿ ಪಡಿತರ ವಿತರಣಾ ಉಪ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಚನ್ನಕೇಶವ ನಗರದಲ್ಲಿ ಬಹುತೇಕರು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುತ್ತಾರೆ. ಪಡಿತರ ತರಲು ರಜೆ, ಒಂದು ದಿನದ ಕೂಲಿ, ಆಟೋಗೆ ಹೆಚ್ಚಿನ ಬಾಡಿಗೆ ಕೊಡಬೇಕಿತ್ತು. ಚನ್ನಕೇಶವ ನಗರದಲ್ಲಿ ಬಿದಿರು ಕೆಲಸಗಾರರ ಸಹಕಾರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಉಪ ಕೆಂದ್ರವನ್ನು ತೆರೆಯಲಾಗಿದೆ ಎಂದರು. ಇಲ್ಲಿನ ಮನೆಗಳಿಗೆ ಕೆಲವೇ ದಿನಗಳಲ್ಲಿ ಹಕ್ಕುಪತ್ರ ವಿತರಿಸಲಾಗುವುದು. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ₹15 ಲಕ್ಷ ವೆಚ್ಚದ ಕಾಮಗಾರಿಗೆ ಅನುಮೋದನೆ ದೊರೆತಿದೆ ಎಂದರು.
ಪುರಸಭೆ ಸದಸ್ಯ ಬಿ.ಸಿ. ಜಗದೀಶ್ ಮಾತನಾಡಿ, ಇಲ್ಲಿಯೇ ವಿತರಣೆ ಆರಂಭಿಸಿರುವುದು ಶ್ಲಾಘನೀಯ. ಇಲ್ಲಿನ ನಿವಾಸಿಗಳಿಗೆ ಶೀಘ್ರದಲ್ಲೆ ಹಕ್ಕುಪತ್ರ ನೀಡಲಿದ್ದಾರೆ ಎಂದರು. ಮುಖಂಡ ಎಂ.ಜಿ.ನಿಂಗರಾಜ್ ಮಾತನಾಡಿ, ಹಕ್ಕುಪತ್ರ ಹಾಗೂ ಕುಡಿಯುವ ನೀರು, ರಸ್ತೆ ಸೌಲಭ್ಯವನ್ನೂ ಒದಗಿಸಿದರೆ ನಮಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಬಿದಿರು ಸಹಕಾರ ಸಂಘದ ಅಧ್ಯಕ್ಷ ಕೇಬಲ್ ವಿಜಯ ಕುಮಾರ್, ಆಹಾರ ಇಲಾಖೆಯ ಶಿರಸ್ತೇದಾರರಾದ ವೀಣಾ, ಗೀತಾಂಜಲಿ, ಪುರುಷೋತ್ತಮ್, ಮುಖಂಡರಾದ ವೀರಭದ್ರಪ್ಪ, ಅರುಣ್ ಕುಮಾರ್, ರಮೇಶ್, ಪುರುಷೋತ್ತಮ್, ಮಹೇಶ್, ವೇಲು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.