ADVERTISEMENT

ನುಗ್ಗೇಹಳ್ಳಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಭೂಮಿಪೂಜೆ

20 ಹಳ್ಳಿಗಳ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡುವ ಉದ್ದೇಶ: ಶಾಸಕ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:10 IST
Last Updated 12 ಆಗಸ್ಟ್ 2025, 7:10 IST
ಚಾಮುಂಡೇಶ್ವರಿ ವಿದ್ಯುತ್ ನಿಗಮ ಚನ್ನರಾಯಪಟ್ಟಣ ಮತ್ತು ನುಗ್ಗೇಹಳ್ಳಿ ವಿಭಾಗ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹೋಬಳಿಯ ಕಗ್ಗೆರೆ ಗ್ರಾಮದ ಬಳಿ ಸುಮಾರು ₹20 ಕೋಟಿ ವೆಚ್ಚದ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ  ಸೋಮವಾರ ಭೂಮಿ ಪೂಜೆ ನೆರವೇರಿಸಿದರು 
ಚಾಮುಂಡೇಶ್ವರಿ ವಿದ್ಯುತ್ ನಿಗಮ ಚನ್ನರಾಯಪಟ್ಟಣ ಮತ್ತು ನುಗ್ಗೇಹಳ್ಳಿ ವಿಭಾಗ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹೋಬಳಿಯ ಕಗ್ಗೆರೆ ಗ್ರಾಮದ ಬಳಿ ಸುಮಾರು ₹20 ಕೋಟಿ ವೆಚ್ಚದ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ  ಸೋಮವಾರ ಭೂಮಿ ಪೂಜೆ ನೆರವೇರಿಸಿದರು    

ನುಗ್ಗೇಹಳ್ಳಿ: ‘ಮಟ್ಟನವಿಲೆ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಸುಮಾರು 20 ಹಳ್ಳಿಗಳ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡುವ ಸಲುವಾಗಿ ಸುಮಾರು ₹20 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಲಾಗಿದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಚಾಮುಂಡೇಶ್ವರಿ ವಿದ್ಯುತ್ ನಿಗಮ ಚನ್ನರಾಯಪಟ್ಟಣ ಮತ್ತು ನುಗ್ಗೇಹಳ್ಳಿ ವಿಭಾಗ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹೋಬಳಿಯ ಕಗ್ಗೆರೆ ಗ್ರಾಮದ ಬಳಿ ಸುಮಾರು ₹20 ಕೋಟಿ ವೆಚ್ಚದ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮಟ್ಟನವಿಲೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಕಗ್ಗೆರೆ ಗ್ರಾಮದ ಬಳಿ ಚಾಮುಂಡೇಶ್ವರಿ ವಿದ್ಯುತ್ ನಿಗಮ ಹಾಗೂ ರಾಮಲಿಂಗಂ ಕನ್ಸ್ಟ್ರಕ್ಷನ್ ಖಾಸಗಿ ಸಹಭಾಗಿತ್ವದಲ್ಲಿ ಸುಮಾರು ₹20 ಕೋಟಿ ವೆಚ್ಚದಲ್ಲಿ 25 ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದ್ದು, ಈ ಸೋಲಾರ್ ಪ್ಲಾಟ್ ನಿಂದ 7 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಒಂದಲಾಗಿದೆ’ ಎಂದರು.

ADVERTISEMENT

‘ಪ್ರತಿದಿನ ಕನಿಷ್ಠ 14 ಗಂಟೆ ವಿದ್ಯುತ್ ಪೂರೈಕೆ ಮಾಡಬಹುದು. ಇದರಿಂದ ಈ ಭಾಗದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಹೆಚ್ಚು ಅನುಕೂಲವಾಗಲಿದೆ. ಕಗ್ಗೆರೆ ಗ್ರಾಮದ ಬಳಿ ಭೂಮಿ ನೀಡಿರುವ ರೈತರಿಗೆ ಪ್ರತಿ ಎಕರೆಗೆ ವಾರ್ಷಿಕ ₹50,000  ನೀಡಲಾಗುತ್ತಿದ್ದು ಎರಡು ವರ್ಷಗಳಿಗೊಮ್ಮೆ ಶೇ 5ರಷ್ಟು  ಹೆಚ್ಚಳ ಮಾಡುವುದಾಗಿ ಗುತ್ತಿಗೆದಾರರು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ರೈತರಿಗೆ ಉತ್ತಮ ಬೆಲೆ ಸಿಗುತ್ತಿದ್ದು ಈ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದರು.

‘ರೈತರು ಸ್ವಯಂ ಪ್ರೇರಿತರಾಗಿ ಸೋಲಾರ್ ಪ್ಲಾಂಟ್ ಗಳಿಗೆ ಭೂಮಿ ನೀಡಲು ಮುಂದಾದರೆ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಬಹುದಾಗಿದೆ’ ಎಂದರು.

ಚಾಮುಂಡೇಶ್ವರಿ ವಿದ್ಯುತ್ ನಿಗಮದ ಚನ್ನರಾಯಪಟ್ಟಣ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರತ್ನ, ನುಗ್ಗೇಹಳ್ಳಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಜ್ರ ಕುಮಾರ್ ಎಚ್ ಡಿ, ವಿಭಾಗ ಕಚೇರಿಯ ಸಹಾಯಕ ಎಂಜಿನಿಯರ್ ಹರೀಶ್, ನುಗ್ಗೇಹಳ್ಳಿ ಕಚೇರಿ ಸಹಾಯಕ ಎಂಜಿನಿಯರ್ ಮಾದೇವ್, ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಪೂರ್ತಿ ವಿಜಯಕುಮಾರ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷರಾದ ಕಗ್ಗೆರೆ ನಾಗೇಂದ್ರ ಬಾಬು, ಹುಲಿಕೆರೆ ಸಂಪತ್ ಕುಮಾರ್, ಮುಖಂಡರಾದ ಬೆಳಗಿಹಳ್ಳಿ ಪುಟ್ಟಸ್ವಾಮಿ, ಉಳ್ಳಾವಳ್ಳಿ ರಮೇಶ್, ರಾಮಲಿಂಗ ಕಂಟ್ರಾಕ್ಷನ್ಸ್ ಲಿಮಿಟೆಡ್ ಪ್ರಾದೇಶಿಕ ವ್ಯವಸ್ಥಾಪಕ ಶೇಖರ್ ವಿ, ವಲಯ ವ್ಯವಸ್ಥಾಪಕ ರಾಕೇಶ್, ಸೇರಿದಂತೆ ರೈತ ಸಂಘದ ಪ್ರಮುಖರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.