ಹಾಸನ: ಹೊರವಲಯದ ಆಡುವಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಆಡುವಳ್ಳಿ ಬಡಾವಣೆಯ ಪ್ರಾಥಮಿಕ ಶಾಲೆ ದುರಸ್ತಿ ಹಂತದಲ್ಲಿದೆ. ಈಗಾಗಲೇ ಹತ್ತಾರು ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳ ಅನುಕೂಲಕ್ಕಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
₹5 ಲಕ್ಷ ಶಾಸಕರ ಅನುದಾನ ಹಾಗೂ ₹5 ಲಕ್ಷ ಜಿಲ್ಲಾ ಪಂಚಾಯಿತಿ ಅನುದಾನದ ಅಡಿಯಲ್ಲಿ ಒಟ್ಟು ₹10 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಮಳೆಗಾಲದಲ್ಲಿ ಆಡುವಳ್ಳಿ ಶಾಲೆ ಗೋಡೆ ಕುಸಿದು ಅವಘಡಗಳು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಮನವಿ ಮೇರೆಗೆ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಸಿಎಸ್ಆರ್ ಅನುದಾನ ಬಳಸಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯ ಪ್ರಾರಂಭಿಸಬೇಕು. ಸರ್ಕಾರಿ ಶಾಲೆಗಳ ಉಳಿವು ಜಿಲ್ಲಾಡಳಿತ, ಸರ್ಕಾರದ ಹಾಗೂ ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ನಗರಸಭೆ ಸದಸ್ಯರಾದ ಮಂಜುನಾಥ್, ವಾಸು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಮುಖಂಡರಾದ ಭಾನು ಪಟೇಲ್, ಸುನಿಲ್, ಯೋಗೇಶ್, ವೆಂಕಟೇಶ್, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.