ಚನ್ನರಾಯಪಟ್ಟಣ: 2018ರಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಜೈನ ಮಠದವತಿಯಿಂದ ಸಾಹಿತಿ ಎಸ್.ಎಲ್. ಭೈರಪ್ಪ ಅವರನ್ನು ಗೌರವಿಸಲಾಗಿತ್ತು.
ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಆಗಮಿಸಿದ್ದ ಭೈರಪ್ಪ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿತ್ತು. ಅಂದಿನ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಭೈರಪ್ಪ ಅವರಿಗೆ ‘ವಿದ್ಯಾವಾಚಸ್ಪತಿ’ ಬಿರುದು ನೀಡಿ ಸನ್ಮಾನಿಸಿ, ‘ಸರಸ್ವತಿ’ ಹಾಗೂ ‘ಬಾಹುಬಲಿ’ ಭಾವಚಿತ್ರ ಮತ್ತು ಗ್ರಂಥ ನೀಡಿ ಗೌರವಿಸಿದ್ದರು.
ಸನ್ಮಾನ ಸ್ವೀಕರಿಸಿದ್ದ ಭೈರಪ್ಪ, ‘ಇಂದ್ರಿಯವನ್ನು ನಿಗ್ರಹಿಸಿದ ಬಾಹುಬಲಿ ಶ್ರೇಷ್ಠ ಎನ್ನಿಸಿಕೊಂಡಿದ್ದಾರೆ. ಸಾಧನೆ ಮಾಡಲು ಜೀವನದಲ್ಲಿ ಸಿದ್ಧಾಂತ ಇರಬೇಕು. ಅಹಿಂಸಾ ತತ್ವವನ್ನು ನೈಜ ಅರ್ಥದಲ್ಲಿ ಅನುಷ್ಠಾನಕ್ಕೆ ತರುವ ಮೂಲಕ ಭಾರತೀಯ ದರ್ಶನಕ್ಕೆ ಜೈನಧರ್ಮ ಪ್ರಮುಖ ಕೊಡುಗೆ ನೀಡಿದೆ’ ಎಂದು ಹೇಳಿದ್ದರು.
'ನಾನು ಕಾದಂಬರಿ ರಚಿಸಲು ಜೈನಧರ್ಮ ಸಾಕಷ್ಟು ಸಹಕಾರಿಯಾಗಿದೆ’ ಎಂದು ಹೇಳಿದ್ದರು.
ಸಮಾಜಕ್ಕೆ ಉಪಯುಕ್ತ ಗ್ರಂಥ ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಸಾಹಿತಿ ಎಸ್.ಎಲ್. ಭೈರಪ್ಪ ಅನನ್ಯ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಶ್ರಮದಿಂದ ಶ್ರೇಷ್ಠ ಸಾಧನೆ ಮಾಡಿದ್ದಾರೆ’ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.