ADVERTISEMENT

ಹಾಸನ: ಸಾಹಿತ್ಯ ಸಂತನಿಗೆ ವಯಸ್ಸಿನ ಹಂಗಿರಲಿಲ್ಲ..

ಸಕ್ರಿಯವಾಗಿ ಭಾಗವಹಿಸುತ್ತಿದ್ದ ಭೈರಪ್ಪ: ಸಾಹಿತ್ಯ ವಲಯದಲ್ಲಿ ಮಡುಗಟ್ಟಿದ ಶೋಕ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:48 IST
Last Updated 25 ಸೆಪ್ಟೆಂಬರ್ 2025, 5:48 IST
ಶ್ರವಣಬೆಳಗೊಳದಲ್ಲಿ 2018ರಲ್ಲಿ ಜರುಗಿದ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಭಾಗವಹಿಸಿದ್ದ ಎಸ್.ಎಲ್. ಭೈರಪ್ಪ ಅವರನ್ನು ಅಂದಿನ ಕ್ಷೇತ್ರದ ಪೀಠಾಧಿಪತಿ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದ್ದರು.
ಶ್ರವಣಬೆಳಗೊಳದಲ್ಲಿ 2018ರಲ್ಲಿ ಜರುಗಿದ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಭಾಗವಹಿಸಿದ್ದ ಎಸ್.ಎಲ್. ಭೈರಪ್ಪ ಅವರನ್ನು ಅಂದಿನ ಕ್ಷೇತ್ರದ ಪೀಠಾಧಿಪತಿ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದ್ದರು.   

ಹಾಸನ: ಆಧುನಿಕ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಎಸ್‌.ಎಲ್‌. ಭೈರಪ್ಪ, ಅವರ ಬಗ್ಗೆ ಜಿಲ್ಲೆಯ ಸಾಹಿತ್ಯವಲಯವೂ ಸೇರಿದಂತೆ ಎಲ್ಲೆಡೆಯೂ ಅಪಾರ ಗೌರವವಿದೆ. ಜಿಲ್ಲೆಯ ಹೆಮ್ಮೆ ಸಾಹಿತಿ ಎಂಬುದರ ಜೊತೆಗೆ ಸರಳ ವ್ಯಕ್ತಿತ್ವದ ಭೈರಪ್ಪನವರ ಮಾರ್ಗದರ್ಶನ, ಅವರ ಉತ್ಸಾಹವನ್ನು ಜಿಲ್ಲೆಯ ಜನರು ಸ್ಮರಿಸುತ್ತಿದ್ದಾರೆ.

ಎಸ್.ಎಲ್. ಭೈರಪ್ಪನವರು ಇಳಿ ವಯಸ್ಸಿನಲ್ಲಿಯೂ ಸಾಹಿತ್ಯಾಸಕ್ತಿ ಮೈಗೂಡಿಸಿಕೊಂಡಿದ್ದರು ಎಂಬುದಕ್ಕೆ ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಕನ್ನಡ ಸಾಹಿತ್ಯದ ಮೇರು ಸಾಹಿತಿ, ಅಕ್ಷರ ಮಾಂತ್ರಿಕರೆಂದೇ ಖ್ಯಾತರಾಗಿದ್ದ ಭೈರಪ್ಪ, 2022ರಲ್ಲಿ ಆಯೋಜಿಸಿದ್ದ ಹೊಯ್ಸಳ ಸಾಹಿತ್ಯೋತ್ಸವವನ್ನು ಉದ್ಘಾಟಿಸಿದ್ದಲ್ಲದೇ, ಸಕ್ರಿಯವಾಗಿ ಭಾಗವಹಿಸಿದ್ದರು.

91ನೇ ಇಳಿ ವಯಸ್ಸಿನಲ್ಲಿಯೂ ಎರಡು ದಿನ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಪ್ರತಿ ಕಾರ್ಯಕ್ರಮಗಳನ್ನೂ ಪ್ರೇಕ್ಷಕರಾಗಿ ಆಸ್ವಾದಿಸಿದ್ದರು. ಎರಡು ದಿನ ನಡೆದ 8 ಸಾಹಿತ್ಯಗೋಷ್ಠಿಗಳಲ್ಲಿ ಪೂರ್ಣ ಪ್ರಮಾಣದ ಅವರ ಭಾಗವಹಿಸುವಿಕೆ ಎಲ್ಲರ ಗಮನ ಸೆಳೆದಿತ್ತು. ಈ ಸಾಹಿತ್ಯಗೋಷ್ಠಿಯಲ್ಲಿ 70ಕ್ಕೂ ಹೆಚ್ಚು ಹೆಸರಾಂತ ಸಾಹಿತಿಗಳು, ಲೇಖಕರು, ವಿಮರ್ಶಕರು, ಯುವ ಬರಹಗಾರರು ಭಾಗವಹಿಸಿದ್ದರು.

ADVERTISEMENT

‘ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹೊಯ್ಸಳ ಸಾಹಿತ್ಯೋತ್ಸವಕ್ಕೆ ಭೈರಪ್ಪ ಅವರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿತ್ತು. ಇಳಿ ವಯಸ್ಸಿನಲ್ಲೂ ಅಷ್ಟೇ ಉತ್ಸಾಹದಿಂದ ನಮ್ಮ ಆಹ್ವಾನ ಪುರಸ್ಕರಿಸಿದ್ದರು. ಅಲ್ಲದೇ ಸಮ್ಮೇಳನ ಮುಗಿಯುವವರೆಗೂ ನಮ್ಮೊಂದಿಗೆ ಇದ್ದು ಸಹಕರಿಸಿದರು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮಲ್ಲೇಶ ಗೌಡ ಸ್ಮರಿಸಿದರು.

ಕನಕಪುರದಲ್ಲಿ 1999ರ ಫೆಬ್ರುವರಿ 11ರಿಂದ 14ರವರೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲೂ ನಗರದಲ್ಲಿ ನಾಗರಿಕ ವೇದಿಕೆ ಮೂಲಕ ಭೈರಪ್ಪ ಅವರಿಗೆ ಸನ್ಮಾನ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಹಾಗೂ ಕಾದಂಬರಿಗಳ ಮೂಲಕ ಜನರ ಮನಕ್ಕೆ ಹತ್ತಿರವಾಗಿದ್ದ ಭೈರಪ್ಪ ಅವರು ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದವರು ಎಂಬುದು ಹೆಮ್ಮೆಯ ವಿಷಯ.

ಹಾಸನದಲ್ಲಿ ಜರುಗಿದ ಹೊಯ್ಸಳ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದ ಎಸ್‌.ಎಲ್‌. ಭೈರಪ್ಪ ಅವರು ಸಾಮಾನ್ಯರಂತೆ ಉಪಾಹಾರ ಸೇವಿಸಿದರು. ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ. ಜಯಶ್ರೀ ಇದ್ದರು.

ನನ್ನ ಮಾನಸಿಕ ಗುರುಗಳು ಭೈರಪ್ಪ. ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಅವರ ‘ಗೃಹಭಂಗ’ ಕೃತಿಯ‌ನ್ನು ಓದಿ ಅತ್ತಿದ್ದೇನೆ. ಅವರಂಥ ಬರಹಗಾರರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ. ಅವರನ್ನು ಕಳೆದುಕೊಂಡ ಕನ್ನಡ ಸಾಹಿತ್ಯ‌ಲೋಕ ಬಡವಾಗಿದೆ.

ಶೈಲಜಾ ಹಾಸನ ಸಾಹಿತಿ

ಸರಳವಾದ ಸ್ವಾನುಭವದ ಅವರ ಎಲ್ಲ ಕೃತಿಗಳನ್ನು ಓದಬೇಕು ಎನ್ನುವ ಹಂಬಲ ಮೂಡಿಸುತ್ತವೆ. ನಿಜವಾಗಿಯೂ ಜ್ಞಾನಪೀಠ ಪ್ರಶಸ್ತಿ ದೊರಕಬೇಕಾದ ಸಾಹಿತಿಯನ್ನು ಕಳೆದುಕೊಂಡಿರುವ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.

ರಾಜೇಶ್ವರಿ ಹುಲ್ಲೇನಹಳ್ಳಿ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ

ಜಿಲ್ಲೆಯ ಮೊದಲ ಸಾಧಕ ಕನ್ನಡ ಸಾಹಿತ್ಯದಲ್ಲಿ ಜಿಲ್ಲೆಯ ಮೊದಲ ಸಾಧಕ ಎಂದು ಹೇಳಬಹುದು. ಕಾದಂಬರಿಕಾರರಾಗಿ 5–6 ದಶಕದಿಂದ ಉತ್ತಮ ಕಾದಂಬರಿ ಮೂಲಕ ಓದುಗರ ಸಂಖ್ಯೆ ಹೆಚ್ಚಿಸಿದ ಕೀರ್ತಿ ಭೈರಪ್ಪ ಅವರಿಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು.

ರೂಪ ಹಾಸನ ಲೇಖಕಿ

ಭೈರಪ್ಪನವರ ಪ್ರತಿ ಕಾದಂಬರಿ ರಚನೆ ಹಿಂದೆ ಅವರ ಗಂಭೀರ ಅಧ್ಯಯನ ಇರುವುದನ್ನು ಕಂಡಿದ್ದೇವೆ. ‘ಗೃಹಭಂಗ’ ‘ದಾಟು’ ‘ವಂಶವೃಕ್ಷ’ದಂತಹ ಶ್ರೇಷ್ಠ ಕಾದಂಬರಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಮೇರು ಸಾಹಿತಿ ಅವರು.

ಕೆ.ಟಿ. ಜಯಶ್ರೀ ಅನನ್ಯ ಟ್ರಸ್ಟ್‌ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.