ADVERTISEMENT

ಜೈವಿಕ ಇಂಧನ: ಮೌಲ್ಯವರ್ಧನೆಗೆ ಒತ್ತು ನೀಡಿ

ಮಡೇನೂರು ಜೈವಿಕ ಇಂಧನ ಉದ್ಯಾನಕ್ಕೆ ಭೇಟಿ ನೀಡಿದ ಮಂಗಳಿ ಅಧ್ಯಕ್ಷ ಸುಧೀಂದ್ರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 3:01 IST
Last Updated 29 ಅಕ್ಟೋಬರ್ 2025, 3:01 IST
ಹಾಸನದ ತಾಲ್ಲೂಕಿನ ಮಡೇನೂರು ಜೈವಿಕ ಇಂಧನ ಉದ್ಯಾನಕ್ಕೆ ಮಂಗಳವಾರ ಭೇಟಿ ನೀಡಿದ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಈ. ಸುಧೀಂದ್ರ, ಯಂತ್ರಗಳನ್ನು ಪರಿಶೀಲಿಸಿದರು
ಹಾಸನದ ತಾಲ್ಲೂಕಿನ ಮಡೇನೂರು ಜೈವಿಕ ಇಂಧನ ಉದ್ಯಾನಕ್ಕೆ ಮಂಗಳವಾರ ಭೇಟಿ ನೀಡಿದ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಈ. ಸುಧೀಂದ್ರ, ಯಂತ್ರಗಳನ್ನು ಪರಿಶೀಲಿಸಿದರು   

ಹಾಸನ: ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ಜೈವಿಕ ಇಂಧನ ಉದ್ಯಾನಗಳಲ್ಲಿನ ಪ್ರಾತ್ಯಕ್ಷಿಕೆಗಳು, ಉದ್ದೇಶಿತ ಉನ್ನತೀಕರಣ ಹಾಗೂ ವಾಣಿಜ್ಯೀಕರಣ ಯೋಜನೆಗಳಿಗೆ ಪೂರಕವಾಗಿವೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ತಿಳಿಸಿದರು.

ತಾಲ್ಲೂಕಿನ ಮಡೇನೂರಿನ ಜೈವಿಕ ಇಂಧನ ಉದ್ಯಾನಕ್ಕೆ ಮಂಗಳವಾರ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ಅವರು, ರೈತರು, ಜೈವಿಕ ಇಂಧನ ಉದ್ಯಾನ ಹಾಗೂ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿದರು.

ಹಾಸನ ಜಿಲ್ಲೆಯಲ್ಲಿ ಅಪಾರ ಜೈವಿಕ ಇಂಧನ ಸಂಪನ್ಮೂಲಗಳು ಲಭ್ಯವಿದ್ದು, ವಿವಿಧ ಕೃಷಿ ತ್ಯಾಜ್ಯಗಳ ಕ್ರೋಡೀಕರಣಕ್ಕೆ ವಿಪುಲ ಅವಕಾಶಗಳಿವೆ. ಈ ಸಂಬಂಧ ವ್ಯವಸ್ಥಿತ ಮೌಲ್ಯವರ್ಧನೆಗೆ ಒತ್ತು ನೀಡಬೇಕು ಎಂದರು.

ADVERTISEMENT

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಮೈಸೂರು ಕಂದಾಯ ವಿಭಾಗದಲ್ಲಿ ನಿರ್ಮಿಸಿದ ಮೊಟ್ಟ ಮೊದಲ ಜೈವಿಕ ಇಂಧನ ಇದಾಗಿದ್ದು, ಜೈವಿಕ ಇಂಧನ ಕ್ಷೇತ್ರದ ಎಲ್ಲ ಆಯಾಮಗಳಿಗೆ ಕಾರಣೀಭೂತವಾಗಿದೆ ಎಂದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 50 ಎಕರೆ ಪ್ರದೇಶದಲ್ಲಿರುವ ಈ ಜೈವಿಕ ಉದ್ಯಾನದ ಜೈವಿಕ ಇಂಧನ ಸಸ್ಯಪಾಲನಾ ಕ್ಷೇತ್ರ, ನೆಡು ತೋಪುಗಳು, ಬಯೋ ಡೀಸೆಲ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ವಾಸ್ತವಿಕ ಸ್ಥಿತಿ ಗತಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ನಂತರ ಕೈಗೊಳ್ಳಲಾಗಿರುವ ಅನುಪಾಲನಾ ಕ್ರಮಗಳ ಕುರಿತು ಚರ್ಚಿಸಿದ ಅವರು, ಮಂಡಳಿಯ ಉದ್ದೇಶಿತ ಮುಂದಿನ ಕಾರ್ಯಸೂಚಿಗಳ ಕುರಿತು ಮನವರಿಕೆ ಮಾಡಿಕೊಟ್ಟರು.

ಜೈವಿಕ ಇಂಧನಗಳ ಉತ್ಪಾದನಾ ಹಂತಗಳಲ್ಲಿ ಗುಣಮಟ್ಟ ನಿಯಂತ್ರಣ ಕಾಯ್ದುಕೊಳ್ಳುವಿಕೆ ಸವಾಲಾಗಿದ್ದು, ಇತ್ತೀಚೆಗೆ ಬೀದರನಲ್ಲಿ ಕಳಪೆ ಗುಣಮಟ್ಟದ ಜೈವಿಕ ಇಂಧನ ಮಾರಾಟ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದನ್ನು ಪ್ರಸ್ತಾಪಿಸಿದರು.

ಈ ಜೈವಿಕ ಇಂಧನ ಉದ್ಯಾನವು, ಪ್ರಸ್ತುತ ಮಂಡ್ಯದಲ್ಲಿ ಆರಂಭವಾಗಿರುವ ನೂತನ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಬೇಕಿದ್ದು, ಮುಂದಿನ ಕ್ರಮ ವಹಿಸಲು ಸಲಹೆ ನೀಡಿದರು.

ಕೃಷಿ ಕಾಲೇಜಿನ ಡೀನ್ ಡಾ.ಮುನಿಸ್ವಾಮಿಗೌಡ, ಸಂಯೋಜಕ ಡಾ.ಗಿರೀಶ್ ಎ.ಸಿ., ಅಧಿಕಾರಿಗಳು, ರೈತರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.