
ಹಾಸನ: ಜಿಲ್ಲೆಯ ಸಲೀಂ ಅಲಿ ಪಕ್ಷಿ ವೀಕ್ಷಕರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ರೆಡ್ ಕ್ರಾಸ್ ಭವನದ ಸಭಾಂಗಣದಲ್ಲಿ ಈಚೆಗೆ ನಡೆಯಿತು. ಪಕ್ಷಿ ವೀಕ್ಷಕರ ಸಂಘದ ವಿವಿಧ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ನಡೆಸಿದ ಕಾರ್ಯ ಚಟುವಟಿಕೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ಸಭೆಯ ಚರ್ಚೆಯಲ್ಲಿ ತೀರ್ಮಾನವಾದಂತೆ, ಪ್ರತಿ ಅಜೀವ ಸದಸ್ಯರನ್ನು ನೋಂದಾಯಿಸುವಾಗ ₹ 1ಸಾವಿರ ಶುಲ್ಕ ಸಂಗ್ರಹ ಮಾಡಬೇಕು. ವಿದ್ಯಾರ್ಥಿಗಳಿಂದ ವಾರ್ಷಿಕ ಸದಸ್ಯತ್ವ ಪಡೆಯಲು ₹ 50 ಶುಲ್ಕ ಪಡೆಯಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಕ್ಷಿ ವೀಕ್ಷಣೆಗೆ ತಿಂಗಳಿಗೊಮ್ಮೆ ಸ್ಥಳೀಯ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪಕ್ಷಿಗಳ ಬಗ್ಗೆ ಮಾಹಿತಿ ನೀಡಬೇಕು. ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ, ಪಕ್ಷಿಗಳ ಕುರಿತು ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳನ್ನು ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲು ನಿರ್ಧರಿಸಲಾಯಿತು.
ಹೊರಾಂಗಣ ಪಕ್ಷಿ ವೀಕ್ಷಣೆಯ ಕಾರ್ಯಕ್ರಮಗಳನ್ನು ಆಗಾಗ್ಗೆ ಹಮ್ಮಿಕೊಂಡು ಹೊರ ರಾಜ್ಯದ ಪಕ್ಷಿ ಸಮೂಹಗಳ ಬಗ್ಗೆ ಅಧ್ಯಯನ ಮಾಡಲು ನಿರ್ಣಯಿಸಲಾಯಿತು. ಹಾಸನ ಸಲೀಂ ಅಲಿ ಪಕ್ಷಿ ವೀಕ್ಷಕರ ಸಂಘದ ಕಾರ್ಯಚಟುವಟಿಕೆಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಆಶ್ರಯದಲ್ಲಿ ನಡೆಸುವಂತೆ ಸದಸ್ಯರು ಒಪ್ಪಿಗೆ ನೀಡಿದರು.
ಸಾರ್ವಜನಿಕರು, ಯುವಜನತೆ ಮತ್ತು ಶಾಲಾ ಮಕ್ಕಳು ಈ ಪಕ್ಷಿ ವೀಕ್ಷಣೆ ಸಂಘದ ಸದಸ್ಯತ್ವ ಪಡೆದು, ಸದುಪಯೋಗ ಪಡೆದುಕೊಳ್ಳುವಂತೆ ಪ್ರಚಾರ ನೀಡಲು ತೀರ್ಮಾನಿಸಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ಭೇಟಿ ನೀಡಿ, ವಲಸೆ ಬರುವ ಜಲಚರ ಪಕ್ಷಿಗಳ ಗಣತಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳಾಗಿ ದೇಸಾಯಿ ಬಿ.ಎಸ್.(ಅಧ್ಯಕ್ಷ), ಡಾ. ವಿನೋದ್ ವೈ.ವಿ. (ಉಪಾಧ್ಯಕ್ಷ), ಬಿ.ಆರ್. ಉದಯಕುಮಾರ್ (ಕಾರ್ಯದರ್ಶಿ), ಎಚ್.ಡಿ. ಜಯೇಂದ್ರಕುಮಾರ್ (ಖಜಾಂಚಿ) ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಹಿಂದಿನ ಅಧ್ಯಕ್ಷರಾದ ಸುಬ್ಬಸ್ವಾಮಿ, ಹೆಮ್ಮಿಗೆ ಮೋಹನ್, ಡಾ.ಬಿ.ಸಿ. ರವಿಕುಮಾರ್, ಎಸ್.ಎಸ್. ಪಾಷಾ, ಕೆ.ಎಸ್. ರವಿಕುಮಾರ್, ಕೆ.ಟಿ. ಜಯಶ್ರೀ, ಜಯಪ್ರಕಾಶ್, ಗಿರೀಶ್, ಭೀಮರಾಜ್ ಹಾಗೂ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.