ADVERTISEMENT

ಬಿಜೆಪಿ ಅಭ್ಯರ್ಥಿ ಪರ ಒಲವು: ಶಾಸಕ ಪ್ರೀತಂ ಜೆ. ಗೌಡ ವಿಶ್ವಾಸ

ಏ.10 ಅಥವಾ 11 ಜಿಲ್ಲೆಗೆ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 14:52 IST
Last Updated 27 ಮಾರ್ಚ್ 2019, 14:52 IST
ಪ್ರೀತಂ ಗೌಡ
ಪ್ರೀತಂ ಗೌಡ   

ಹಾಸನ: ‘ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಆರ್‌.ಪ್ರಜ್ವಲ್‌ ಗೆಲುವು ಅಷ್ಟು ಸುಲಭವಾಗಿಲ್ಲ’ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಭ್ಯರ್ಥಿ ಇನ್ನೂ ಯುವಕರಿದ್ದು, ವಿಧಾನಸಭಾ ಚುನಾವಣೆಯಲ್ಲಿ ತೊಡಗಿಸಿಕೊಂಡು ಬೆಳೆಯುವ ಅವಕಾಶವಿತ್ತು. ಆದರೆ, ಹಿರಿಯರಾದ ದೇವೇಗೌಡರಿಂದ ಕ್ಷೇತ್ರ ಕಸಿದುಕೊಂಡು ಸ್ಪರ್ಧಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ರಾಜಕೀಯ ನಿಂತ ನೀರಲ್ಲ. ಚುನಾವಣೆ ಸಮಯದಲ್ಲಿ ಪಕ್ಷಾಂತರ ಪರ್ವ ಸಾಮಾನ್ಯ. ಅಂದ ಮಾತ್ರಕ್ಕೆ ಪಕ್ಷಾಂತರ ಮಾಡಿರುವ ನಾಯಕರಿಗೆ ಸಾಮರ್ಥ್ಯವಿಲ್ಲವೆಂದು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಯೋಗಾ ರಮೇಶ್ ಅವರು ಪಕ್ಷದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಚುನಾವಣೆ ನಡೆಯುತ್ತಿರುವುದು ದೇಶದ ಭದ್ರತೆ ಹಾಗೂ ಕುಟುಂಬ ರಾಜಕಾರಣದ ವಿರುದ್ಧ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎ.ಮಂಜು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವರು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನಿಂದ ಬೆಳಕಾಗುತ್ತೆ ಎಂಬ ಭ್ರಮೆಯಲ್ಲಿ ಯಾರೂ ಇರಬಾರದು. ನಾನು ಪಕ್ಷ ತೊರೆದ ತಕ್ಷಣ ಸಾವಿರಾರು ಮತಗಳನ್ನು ಬದಲಿಸುತ್ತೇನೆ ಎಂಬ ಭ್ರಮೆಯೂ ತಪ್ಪು. ಜಿಲ್ಲೆಯ ಜನರು ದಬ್ಬಾಳಿಕೆ ಮತ್ತು ಶೋಷಣೆಗೆ ಬೇಸತ್ತಿದ್ದಾರೆ. ಬಿಜೆಪಿಗೆ ಎ.ಮಂಜು ಆಗಲಿ, ಯೋಗಾ ರಮೇಶ್ ಆಗಲಿ ಅಥವಾ ನಾನಾಗಲಿ ಮುಖ್ಯವಲ್ಲ. ಪಕ್ಷ ತೊರೆದು ಇತಿಹಾಸ ನಿರ್ಮಿಸುತ್ತೇನೆ ಎಂಬ ಭ್ರಮೆಯಲ್ಲಿ ಇರಬಾರದು. ಇದು ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲಿಟಿ ಚುನಾವಣೆ ಅಲ್ಲ’ ಎಂದು ಟಾಂಗ್ ನೀಡಿದರು.

‘ದೇಶಕ್ಕೆ ನರೇಂದ್ರ ಮೋದಿ ಬೇಕೋ ಅಥವಾ ಜಿಲ್ಲೆಯಲ್ಲಿ 6 ಜೆಡಿಎಸ್ ಶಾಸಕರ ಅಭ್ಯರ್ಥಿ ಬೇಕೋ ಎಂಬುದನ್ನು ಮತದಾರರು ತೀರ್ಮಾನಿಸುತ್ತಾರೆ. ಜಿಲ್ಲಾ ವ್ಯಾಪಿ ಬಿಜೆಪಿ ಅಭ್ಯರ್ಥಿ ಪರ ಒಲವಿದೆ. ಏ. 10 ಅಥವಾ 11 ರಂದು ನರೇಂದ್ರ ಮೋದಿ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆ’ ಎಂದು ನುಡಿದರು.

‘1996 ರಲ್ಲಿ ನಾನು 8 ನೇ ತರಗತಿ ಓದುತ್ತಿದ್ದೆ. ಜಿಲ್ಲಾ ಪಂಚಾಯಿತಿ ಸದಸ್ಯ ಸ್ವರೂಪ್‌ಗೆ ಅಷ್ಟೂ ಜ್ಞಾನವಿಲ್ಲ. ಅವರಿಗೆ ಸ್ವಂತ ಜ್ಞಾನವಿಲ್ಲ. ಯಾರೋ ಹೇಳಿಕೊಟ್ಟಿದ್ದನ್ನು ಹೇಳುತ್ತಿದ್ದಾರೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.