ADVERTISEMENT

23 ರಾಜ್ಯಗಳಲ್ಲಿ ಬಿಜೆಪಿ ಆಡಳಿತ: ಎಚ್ಡಿಕೆ ಹೇಳಿಕೆಗೆ ಗೋವಿಂದ ಕಾರಜೋಳ ತಿರುಗೇಟು

‘ಬಿಜೆಪಿಗೆ ಲೈಫ್‌ ಕೊಟ್ಟಿದ್ದ ನಾನೇ’ಎಂಬ ಎಚ್‌ಡಿಕೆ ಹೇಳಿಕೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 13:23 IST
Last Updated 26 ಫೆಬ್ರುವರಿ 2021, 13:23 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಹಾಸನ: ‘ದೇಶದಲ್ಲಿ ಬಿಜೆಪಿ ಪಕ್ಷ ಪ್ರಬಲವಾಗಿ ಬೆಳೆದಿದೆ. ನರೇಂದ್ರ ಮೋದಿ ಕಾಲದಲ್ಲಿ 23 ರಾಜ್ಯದಲ್ಲಿ
ಬಿಜೆಪಿ ಆಡಳಿತದಲ್ಲಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರದ್ದು ಯೋಗ್ಯವಾದಂತಹ
ಹೇಳಿಕೆ ಅಲ್ಲ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿರುಗೇಟು ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ. ಎಂಬ ಕುಮಾರಸ್ವಾಮಿ ಹೇಳಿಕೆ ಹಾಸ್ಯಸ್ಪದವಾಗಿದೆ. ನರೇಂದ್ರ ಮೋದಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ
ಎಂದು ಹೇಳಿದಾಗ ಎಲ್ಲರೂ ಹಾಸ್ಯ ಮಾಡುತ್ತಿದ್ದರು. ಇವತ್ತು ಕಾಂಗ್ರೆಸ್ ಮುಕ್ತ ರಾಜ್ಯವಾಗಿದೆ. ಒಂದು ರಾಜ್ಯ
ಬಿಟ್ಟರೆ ಕಾಂಗ್ರೆಸ್‌ ಎಲ್ಲಿದೆ ಎಂದು ಪ್ರಶ್ನಿಸಿದರು.

ಸಚಿವ ಸುಧಾಕರ್ ವಿರುದ್ಧ ಶಾಸಕ ರೇಣುಕಾಚಾರ್ಯ ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ
ಅವರು, ಬಿಜೆಪಿಯಲ್ಲಾಗಲಿ, ಸರ್ಕಾರದಲ್ಲಾಗಲಿ ಯಾವುದೇ ಗೊಂದಲವಿಲ್ಲ. ಅಸಮಾಧಾನ ಇದ್ದರೆ,
ಕೆಲಸಗಳಲ್ಲಿ ತೊಂದರೆಯಿದ್ದರೆ ಮುಖ್ಯಮಂತ್ರಿ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂದು ಶಾಸಕರಿಗೆ
ಮನವಿ ಮಾಡಿದರು.

ADVERTISEMENT

ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂಕಷ್ಟಗಳ ಸರಮಾಲೆ ಎದುರಿಸಿದೆ.
ಅಧಿಕಾರ ವಹಿಸಿಕೊಂಡ ಕೂಡಲೇ ಪ್ರವಾಹದಿಂದ ₹35 ಸಾವಿರ ಕೋಟಿ ಹಾನಿಯಾಯಿತು. ರಸ್ತೆ, ಮನೆ,
ಸಾರ್ವಜನಿಕ ಆಸ್ತಿ ಪಾಸ್ತಿಗಳು ನಷ್ಟವಾಯಿತು. 2020-21 ಸಾಲಿನಲ್ಲಿ ಮತ್ತೆ ಮಳೆಯಿಂದ ₹25 ಸಾವಿರ
ಕೋಟಿ ನಷ್ಟವಾಯಿತು. ಕೇಂದ್ರ ಸರ್ಕಾರ ಮೊದಲ ಕಂತಿನಲ್ಲಿ ₹517 ಕೋಟಿ ಪರಿಹಾರ ಬಿಡುಗಡೆ
ಮಾಡಿದೆ. ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.

ಕಳೆದ ವರ್ಷ ಕೊರೊನಾ ಸಂಕಷ್ಟ ಎದುರಾಯಿತು. ರಾಜ್ಯ ಸರ್ಕಾರ ಜನರಿಗೆ ಹೆಚ್ಚು ತೊಂದರೆ ಆಗದಂತೆ
ನಿರ್ವಹಣೆ ಮಾಡಿದೆ. ಕಳೆದ ವರ್ಷ ನಿರೀಕ್ಷೆ ಮಾಡಿದಷ್ಟು ಆದಾಯ ಬರಲಿಲ್ಲ. ಕೋವಿಡ್‌ನಿಂದಾಗಿ ವ್ಯಾಪಾರಿಗಳುಸಂಕಷ್ಟಕ್ಕೆ ಒಳಗಾದರು. ಹಲವು ಸಂಕಷ್ಟಗಳ ನಡುವೆಯೂ ಸರ್ಕಾರ ಉತ್ತಮ ಆಡಳಿತ ನೀಡಿದೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ವೇಣುಗೋಪಾಲ್‌, ಮುಖಂಡ ಚಂದ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.