
ಹಾಸನ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ ಅಂಗವಾಗಿ ನಗರದಲ್ಲಿ ಶುಕ್ರವಾರ ಏಕತಾ ನಡಿಗೆ ಜಾಥಾ ಯಶಸ್ವಿಯಾಗಿ ನಡೆಯಿತು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಹೊರಟ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು, ಆರ್.ಸಿ. ರಸ್ತೆ ಮೂಲಕ ಸಂಚರಿಸಿ, ಜಿಲ್ಲಾ ಪಂಚಾಯಿತಿ ಕಚೇರಿ ವೃತ್ತ, ಎನ್.ಆರ್. ವೃತ್ತ, ಹೇಮಾವತಿ ಪ್ರತಿಮೆ, ಮಹಾವೀರ ವೃತ್ತದ ಸುತ್ತುವರದು ಚರ್ಚ್ ಎದುರಿನಿಂದ ಸಾಗಿ ಬಿಜೆಪಿ ಕಚೇರಿಯಲ್ಲಿ ಮುಕ್ತಾಯವಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ‘ದೇಶದ ಮೊದಲ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಸರ್ದಾರ್ ಪಟೇಲ್ ಅವರ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ. ನಡ್ದಾ ಅವರ ಮಾರ್ಗದರ್ಶನದಲ್ಲಿ ಇಡೀ ದೇಶದಲ್ಲಿ ಬಿಜೆಪಿಯಿಂದ ಏಕತಾ ದಿವಾಸ್ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಏಕತಾ ನಡಿಗೆ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘ದೇಶದಲ್ಲಿ 565ಕ್ಕೂ ಹೆಚ್ಚು ರಾಜ್ಯಭಾರ ನಡೆಸುತ್ತಿದ್ದ ಕೂಟವನ್ನು ಒಕ್ಕೂಟವನ್ನಾಗಿ ಮಾಡಲು ಪಟೇಲರ ದಿಟ್ಟ ನಡೆ ಕಾರಣವಾಯಿತು. ಇಂದು ಏಕತಾ ನಡೆಯ ಮೂಲಕ ದೇಶದಲ್ಲಿಡೆ ಒಗ್ಗಟ್ಟನ್ನು ಪ್ರದರ್ಶನ ಮಾಡಲಾಗುತ್ತಿದೆ’ ಎಂದರು.
‘ನಿಜಾಮರು ಸೇರಿದಂತೆ ಎಲ್ಲರನ್ನೂ ಒಕ್ಕೂಟ ವ್ಯವಸ್ಥೆಗೆ ಸೇರಿಸುವಲ್ಲಿ ಪಟೇಲರ ಪಾತ್ರ ಮಹತ್ತರವಾಗಿದೆ. ಪ್ರಾಂತವಾರು ರಾಜ್ಯಗಳನ್ನಾಗಿ ಮಾಡಲು ಏನೆಲ್ಲಾ ಹೋರಾಟ ಮಾಡಿದ್ದಾರೆ ಎಂಬುದು ಇಂದಿಗೂ ಇತಿಹಾಸ. ಪಟೇಲರು ಯಾವ ರೀತಿ ಸಾಮಾಜಿಕ ಬದ್ಧತೆ ಹೊಂದಿದ್ದರು ಎಂಬುದನ್ನು ಇಂದಿನ ಯುವಕರಿಗೆ ತಿಳಿಸುವ ನಿಟ್ಟಿನಲ್ಲಿ ಏಕತಾ ನಡಿಗೆ ಆಯೋಜಿಸಲಾಗಿದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ , ರೈತ ಮೋರ್ಚಾ ಅಧ್ಯಕ್ಷ ನಾರಾಯಣಗೌಡ , ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ , ಪ್ರಸನ್ನ ಕುಮಾರ್, ಶ್ರೀಕಾಂತ್ ಚೆನ್ನಂಗಿಹಳ್ಳಿ, ಗಿರೀಶ್, ಮೋಹನ್, ನೇತ್ರಾವತಿ, ರಾಜೀವ್, ಉಮಾ ರವಿಪ್ರಕಾಶ್, ಹರ್ಷಿತ್, ಯೋಗೇಶ್ ಹಾಗೂ ಇತರರು ಭಾಗವಹಿಸಿದ್ದರು.
ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಏಕತಾ ದಿನ
‘ಕೇಂದ್ರ ಸರ್ಕಾರದ ಮೂಲಕ ಕೆಲ ದಿನದಲ್ಲಿ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಏಕತಾ ದಿನವನ್ನು ಆಚರಿಸಲಾಗುವುದು’ ಎಂದು ಪ್ರೀತಂಗೌಡ ತಿಳಿಸಿದರು. ಹಾಸನ ಸಕಲೇಶಪುರ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ 8 ಕಿ.ಮೀ.ವರೆಗೂ ಪಾದಯಾತ್ರೆ ಮಾಡುವ ಮೂಲಕ ಏಕತಾ ದಿನವನ್ನು ಆಚರಿಸಲಾಗುವುದು. ಶೀಘ್ರ ದಿನಾಂಕ ಘೋಷಣೆ ಮಾಡಲಾಗುವುದು. ರಾಜ್ಯಸಭಾ ಸದಸ್ಯ ಜಗ್ಗೇಶ್ ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದರು. ಅಂದು ಪಕ್ಷಭೇದ ಮರೆತು ಎನ್‌ಸಿಸಿ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ನೇತೃತ್ವದಲ್ಲಿ ಸಮಾಜದ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.