ಹಾಸನ: ನಾಲ್ಕು ಬಾರಿ ಮುಖ್ಯಮಂತ್ರಿ ಆಗಿರುವ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಗೆ ಶಾಶ್ವತ ಯೋಜನೆ ನೀಡಿಲ್ಲ. ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ರಾಜ್ಯಸಭೆ ಸದಸ್ಯ ಎಚ್.ಡಿ.ದೇವೇಗೌಡ ಆರೋಪಿಸಿದರು.
ಆರು ದಶಕಗಳಿಂದ ರಾಜಕಾರಣದಲ್ಲಿದ್ದೇನೆ. ಒಂದು ಬಾರಿ ಸಿ.ಎಂ ಆಗಿದ್ದೇನೆ, ನಂತರ ಪ್ರಧಾನಿಯಾದೆ. ಮಗ ಎಚ್.ಡಿ. ಕುಮಾರಸ್ವಾಮಿ ಸಹ ಸಿ.ಎಂ ಆಗಿದ್ದರು. ಆದರೆ, ಜೆಡಿಎಸ್‌ಗೆ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆಗಳ ನಡುವೆ ತಾರತಮ್ಯ ಮಾಡಲಿಲ್ಲ. ಅವಕಾಶ ಸಿಕ್ಕಾಗ ಕೈಲಾದ ಮಟ್ಟಿಗೆ ಹಲವಾರು ಯೋಜನೆಗಳನ್ನು ಕಾರ್ಯಗತ ಮಾಡಲು ಪ್ರಯತ್ನ ಮಾಡಿದ್ದೇವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನ ವಿಮಾನ ನಿಲ್ದಾಣ, ಚನ್ನಪಟ್ಟಣಕೆರೆ ಅಭಿವೃದ್ಧಿ, ಐ.ಐ.ಟಿ. ಸ್ಥಾಪನೆ ಹಾಗೂ ಗೊರೂರು ಹೇಮಾವತಿ
ಜಲಾಶಯದ ಬಳಿ ಕೆ.ಆರ್.ಎಸ್ ಮಾದರಿ ಬೃಂದಾವನ ಅಭಿವೃದ್ಧಿ ನನೆಗುದಿಗೆ ಬಿದ್ದಿವೆ. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಸನ ಜಿಲ್ಲೆಗೂ ಯಾವುದಾದರೂ ಶಾಶ್ವತ ಯೋಜನೆ ನೀಡಲಿ ಎಂದರು.
ಜಿಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಹಾಸನದಲ್ಲಿ ಐಐಟಿ ಸ್ಥಾಪನೆ ಮಾಡಲು ಭೂಸ್ವಾಧೀನ ಮಾಡಲಾಗಿದೆ. 1996ರಲ್ಲಿ ಸಿ.ಎಂ ಆಗಿದ್ದಾಗಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ 560 ಎಕರೆ ಭೂ ಸ್ವಾಧೀನ ಮಾಡಿ ಕಾಯ್ದಿರಿಸಲಾಗಿದೆ. ಕೇಂದ್ರ ಸರ್ಕಾರ ಶೇ 51 ಹಾಗೂ ರಾಜ್ಯ ಸರ್ಕಾರ 49ರಷ್ಟು ಅನುದಾನ ನೀಡಬೇಕಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬುದು ನನ್ನ ಕನಸು. ಇದರಿಂದ ಪ್ರವಾಸೋದ್ಯಮ ಮತ್ತು ರೈತರು ಬೆಳೆದ ತರಕಾರಿ, ಹೂವುಗಳನ್ನು ರಫ್ತು ಮಾಡಲು ಅವಕಾಶ ಇದೆ ಎಂದು ತಿಳಿಸಿದರು.
ಬೇಲೂರು, ಶ್ರವಣಬೆಳಗೊಳ, ಹಳೇಬೀಡು, ಸಕಲೇಶಪುರ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದ್ದರಿಂದ ನಗರದ ಹೃದಯ ಭಾಗದಲ್ಲಿರುವ ಚನ್ನಪಟ್ಟಣ ಕೆರೆಯಲ್ಲಿ ಮಕ್ಕಳ ರೈಲು, ಮನರಂಜನೆ ಉದ್ಯಾನ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ಸ್ಥಳೀಯ ಶಾಸಕರ ಒತ್ತಾಯಕ್ಕೆ ಮಣಿದು ಅನುದಾನವನ್ನು ಇತರೆ ಕಾಮಗಾರಿಗಳಿಗೆ ವರ್ಗಾಯಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚಿಸಲು ಸೋಮವಾರ ಸಿ.ಎಂ ಭೇಟಿಗೆ ಅವಕಾಶ ಕೇಳಿದ್ದೇನೆ. ಜೆಡಿಎಸ್ ಶಾಸಕರ ಮನವಿಗೆ ಸ್ಪಂದಿಸಿ, ಹಂತ ಹಂತವಾಗಿ ಅನುದಾನ ನೀಡುವುದಾಗಿ ಸಿ.ಎಂ ಭರವಸೆ ನೀಡಿದ್ದಾರೆ. ಹಾಗಾಗಿ ಅವರ ಕಚೇರಿ ಎದುರು ಧರಣಿ ನಡೆಸುವುದು ಸರಿಯಲ್ಲ. ನಾಲ್ಕು ದಿನದಲ್ಲಿ ಅಧಿವೇಶನ ಆರಂಭವಾಗಲಿದ್ದು, ಅಲ್ಲಿಯೇ ಎಲ್ಲ ವಿಷಯವನ್ನು ಶಾಸಕರು ಚರ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.