ADVERTISEMENT

ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್‌ ಕರೆ: ಆತಂಕ ನಿವಾರಣೆ

ರಾತ್ರಿಯಿಡೀ ಪರಿಶೀಲಿಸಿದ ಶ್ವಾನದಳ, ಬಾಂಬ್‌ ನಿಷ್ಕ್ರೀಯ ತಂಡ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:00 IST
Last Updated 17 ಡಿಸೆಂಬರ್ 2025, 6:00 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪರಿಶೀಲಿಸಿದ ಪೊಲೀಸರು.
ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪರಿಶೀಲಿಸಿದ ಪೊಲೀಸರು.   

‌ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಬಾಂಬ್‌ ಬೆದರಿಕೆ ಹುಸಿಯಾಗಿದ್ದು, ನಗರದ ಜನರು ನಿರಾಳರಾಗಿದ್ದಾರೆ. ಇದೀಗ ಇ–ಮೇಲ್‌ ಹಿಂದೆ ಬಿದ್ದಿರುವ ಪೊಲೀಸರು, ಸತ್ಯಾಸತ್ಯತೆ ಪರಿಶೀಲನೆ ಮಾಡುತ್ತಿದ್ದಾರೆ.

ಸೋಮವಾರ (ಡಿ.15) ಹಾಸನ ಕಲೆಕ್ಟರ್ ಅಂಡ್ ಸ್ಟಾಫ್ ಎಂದು ಆರ್ಮಾ ಅಶ್ವಿನ್ ಶೇಖರ್ ಹೆಸರಿನಲ್ಲಿ ಮೇಲ್ ಬಂದಿದ್ದು, ಪಾಕಿಸ್ತಾನ ಐಎಸ್‌ಐ ಸೆಲ್ ಎಕ್ಸ್-ಎಲ್‌ಟಿಟಿಐ ಕೇಡರ್‌ನಿಂದ ಬ್ಲಾಸ್ಟ್ ಮಾಡಲಾಗುತ್ತಿದೆ ಎಂದು ಬರೆಯಲಾಗಿತ್ತು. ತಕ್ಷಣದವೇ ಉಪ ವಿಭಾಗಾಧಿಕಾರಿ ಮೂಲಕ ಪೊಲೀಸರಿಗೆ ದೂರು ನೀಡಿದ ಜಿಲ್ಲಾಧಿಕಾರಿ ಲತಾಕುಮಾರಿ, ಪರಿಶೀಲನೆ ಸೂಚನೆ ನೀಡಿದ್ದರು.

ರಾತ್ರಿಯಿಡೀ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಬಂದ ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ, ಎಲ್ಲಿಯೂ ಸ್ಫೋಟಕದ ಸುಳಿವು ಲಭ್ಯವಾಗಲಿಲ್ಲ. ಬಳಿಕ ಇದೊಂದು ಹುಸಿ ಬಾಂಬ್‌ ಕರೆ ಎಂಬುದು ಖಚಿತವಾಯಿತು. ಎಲ್ಲೆಡೆ ಪರಿಶೀಲನೆಯ ಬಳಿಕ ಆತಂಕ ನಿವಾರಣೆಯಾಯಿತು.

ADVERTISEMENT

ಬೆದರಿಕೆಯ ಮಧ್ಯೆಯೂ ಸಭೆ ನಡೆಸಿದ ಜಿಲ್ಲಾಧಿಕಾರಿ: ಬಂದಿದ್ದ ಇ–ಮೇಲ್‌ನ ಪ್ರಿಂಟೌಟ್‌ ತೆಗೆದು, ಪೊಲೀಸರಿಗೆ ರವಾನಿಸಿದ್ದ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ರಾತ್ರಿಯಾದರೂ ನಿರಾತಂಕವಾಗಿ ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದರು.

ಪೊಲೀಸರ ಪರಿಶೀಲನೆಯ ವೇಳೆಯಲ್ಲೂ ಜಿಲ್ಲಾಧಿಕಾರಿ ಸಭೆ ಮುಂದುವರಿದಿತ್ತು. ಸಭೆಯ ಮಧ್ಯದಲ್ಲಿಯೇ ಸಭಾಂಗಣಕ್ಕೆ ಬಂದ ಶ್ವಾನ ದಳ ಹಾಗೂ ಬಾಂಬ್‌ ನಿಷ್ಕ್ರೀಯ ದಳದ ಸಿಬ್ಬಂದಿ ಎಲ್ಲೆಡೆ ಪರಿಶೀಲಿಸಿದರು.

ಪೊಲೀಸರಿಂದ ತನಿಖೆ ತೀವ್ರ: ಈ ಮಧ್ಯೆ ಇ–ಮೇಲ್‌ ಕಳುಹಿಸಿರುವ ವ್ಯಕ್ತಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು, ಸೈಬರ್‌ ಠಾಣೆಯ ಮೂಲಕ ತನಿಖೆ ತೀವ್ರಗೊಳಿಸಿದ್ದಾರೆ. ಈ ಮಧ್ಯೆ ತುಮಕೂರು ಜಿಲ್ಲಾಧಿಕಾರಿ ಕಚೇರಿಗೂ ಇದೇ ರೀತಿಯ ಇ–ಮೇಲ್‌ ಬಂದಿದ್ದು, ಎರಡೂ ಜಿಲ್ಲೆಗಳ ಪೊಲೀಸರು ಸಮನ್ವಯದಿಂದ ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸೋಮವಾರ ರಾತ್ರಿ ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶ್ವಾನದಳದೊಂದಿಗೆ ಪರಿಶೀಲನೆ ನಡೆಸಲಾಯಿತು. 

ಹಲವು ಘಟನೆ

ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದ ಕೊರಿಯರ್ ಅಂಗಡಿಯಲ್ಲಿ 2022 ಡಿಸೆಂಬರ್‌ 26 ರಂದು ಮಿಕ್ಸಿ ಸ್ಫೋಟ ಸಂಭವಿಸಿತ್ತು. ಬ್ಲಾಸ್ಟ್ ಪ್ರಕರಣ ಉಗ್ರಗಾಮಿ ಕೃತ್ಯ ಅಲ್ಲ. ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದ ಪ್ರೇಮಿಯೊಬ್ಬನ ಕೃತ್ಯ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿತ್ತು. ಈ ವರ್ಷ ಜೂನ್‌ 14 ಶ್ಹ ಹಾಸನದ ವಿದ್ಯಾಸೌಧ ಪಬ್ಲಿಕ್ ಶಾಲೆ ವಿದ್ಯಾಸೌಧ ಕಿಡ್ಸ್ ಮತ್ತು ಕಾಲೇಜುಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಜೂನ್ 16ರ ಮಧ್ಯಾಹ್ನ 1 ಗಂಟೆಗೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದಾಗ ಇದು 'ಹುಸಿ ಬೆದರಿಕೆ' ಎಂಬುದು ದೃಢಪಟ್ಟಿತ್ತು. ಆಲೂರು ತಾಲ್ಲೂಕಿನ ಮನೆಯೊಂದರಲ್ಲಿ ಸೆಪ್ಟೆಂಬರ್ 30ರಂದು ನಿಗೂಢ ಸ್ಫೋಟ ಸಂಭವಿಸಿ ಕಾವ್ಯ (28) ಮತ್ತು ಸುದರ್ಶನ್ (32) ದಂಪತಿ ಮೃತಪಟ್ಟಿದ್ದರು.

ಯಾವುದೇ ಗಂಭೀರ ವಿಷಯ ಇಲ್ಲ. ಇ-ಮೇಲ್ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಾಗಿದ್ದು ಯಾರು ಆತಂಕ ಪಡುವುದು ಬೇಡ.
–ಕೆ.ಎಸ್.ಲತಾಕುಮಾರಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.