ADVERTISEMENT

ಮುಖ್ಯಮಂತ್ರಿ ಬದಲಾವಣೆ ಇಲ್ಲ: ಸಚಿವ ಕೆ.ಗೋಪಾಲಯ್ಯ

ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಸಚಿವ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಮೇ 2022, 15:45 IST
Last Updated 6 ಮೇ 2022, 15:45 IST
ಗೋಪಾಲಯ್ಯ
ಗೋಪಾಲಯ್ಯ   

ಹಾಸನ: ‘ಮುಂದಿನ ಚುನಾವಣೆ ದೃಷ್ಟಿಯಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ’ ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದರು.

ಬೆಳವಾಡಿಯಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಂದಿನ ಚುನಾವಣೆಯ ನೇತೃತ್ವವನ್ನು ಬೊಮ್ಮಾಯಿ ಅವರೇ ವಹಿಸಿಕೊಳ್ಳುತ್ತಾರೆ. ಅಲ್ಲಿಯವರೆಗೂ ಸಿ.ಎಂ ಆಗಿರುತ್ತಾರೆ. ಯಾವುದೇ ಬದಲಾವಣೆ ವಿಚಾರವಾಗಿ ಸಿ.ಎಂ, ರಾಜ್ಯ ಘಟಕದ ಅಧ್ಯಕ್ಷರು ಮತ್ತು ಕೇಂದ್ರ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ’ ಎಂದರು.

ಮೇ 10ರೊಳಗೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಅಲ್ಲಗಳೆದ ಸಚಿವರು, ‘ಹೀಗೆಲ್ಲಾ ಬೀದಿಯಲ್ಲಿ ಮಾತಾಡುವುದು ಸಲ್ಲದು.ರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷ. ಈ ಪಕ್ಷದಲ್ಲಿ ಸದಸ್ಯನಾಗುವುದೇ ಒಂದು ಗೌರವ. ವರಿಷ್ಠರ ಮಾತಿಗೆ ಎಲ್ಲರೂ ಗೌರವ ಕೊಡಬೇಕು. ಅದನ್ನು ಬಿಟ್ಟು ಬೀದಿಯಲ್ಲಿ ನಿಂತು ಮಾತನಾಡಬಾರದು ಎಂದು ಕಿವಿಮಾತು ಹೇಳಿದ ಅವರು, ಯತ್ನಾಳ್ ಅವರು ಪಕ್ಷದಲ್ಲಿ ಹಿರಿಯರಿದ್ದಾರೆ. ಏನೇ ಇದ್ದರೂ ಪಕ್ಷದ ವರಿಷ್ಠರುಮಾತನಾಡಿ ಬಗೆಹರಿಸುತ್ತಾರೆ’ ಎಂದು ತಿಳಿಸಿದರು.

ADVERTISEMENT

‘ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವಥ್ ನಾರಾಯಣ್ ಸಂಬಂಧಿ ಭಾಗಿಯಾಗಿರುವ ಆರೋಪ ಸುಳ್ಳು. ಸಾಕ್ಷಿ ಇದ್ದರೆ ಕೊಡಲಿ. ಕಾಂಗ್ರೆಸ್‍ನವರು ರಾಜಕೀಯವಾಗಿ ತೇಜೋವಧೆ ಮಾಡುವುದನ್ನು ಬಿಡಬೇಕು. ಏನಾದರೂ ಪುರಾವೆ ಇದ್ದರೆ ಕೋರ್ಟ್ ಮೊರೆ ಹೋಗಲಿ’ ಎಂದು ತಿರುಗೇಟು ನೀಡಿದರು.

‘ಯಾವುದೇ ಕಾರಣಕ್ಕೂ ಅಶ್ವಥ್ ನಾರಾಯಣ್ ಇದರಲ್ಲಿ ಭಾಗಿಯಾಗಿಲ್ಲ ಎಂದುಅಭ್ಯರ್ಥಿಗಳ ಕಡೆಯವರೇ ಹೇಳಿದ್ದಾರೆ. ಆದರೂ ಅವರನ್ನು ರಾಜಕೀಯವಾಗಿ ಬಲಿಪಶು ಮಾಡಬೇಕೆಂದು ಈ ರೀತಿ ಆರೋಪ ಮಾಡುತ್ತಿದ್ದಾರೆ’ ಎಂದರು.

ಸಿಐಡಿ ತನಿಖೆ ನಡೆಸುತ್ತಿದ್ದು, ಈಗಾಗಲೇ 22ಕ್ಕೂ ಹೆಚ್ಚು ಮಂದಿಯನ್ನುಬಂಧಿಸಲಾಗಿದೆ. ತನಿಖೆ ನಂತರ ಎಲ್ಲರೂ ಹೊರ ಬರಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.