ADVERTISEMENT

ಮಿದುಳು ನಿಷ್ಕ್ರಿಯ: ಪುತ್ರನ ಅಂಗಾಂಗ ದಾನ ಮಾಡಿದ ಪೋಷಕರು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:15 IST
Last Updated 18 ಡಿಸೆಂಬರ್ 2025, 4:15 IST
ಅಂಗಾಂಗಗಳನ್ನು ಹಾಸನದ ಹಿಮ್ಸ್‌ನಿಂದ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತು 
ಅಂಗಾಂಗಗಳನ್ನು ಹಾಸನದ ಹಿಮ್ಸ್‌ನಿಂದ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತು    

ಹಾಸನ: ಅಪಘಾತದಿಂದ ತೀವ್ರ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ ಪುತ್ರನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಚನ್ನರಾಯಪಟ್ಟಣ ತಾಲ್ಲೂಕಿನ ಸಾಗತವಳ್ಳಿ ಗ್ರಾಮದ ಪೋಷಕರು ಮಾನವೀಯತೆ ಮೆರೆದಿದ್ದಾರೆ.

ಸಾಗತವಳ್ಳಿ ಗ್ರಾಮದ ನಂಜಮ್ಮ ಹಾಗೂ ನಂಜುಂಡೇಗೌಡ ದಂಪತಿಯ ಪುತ್ರ ಯೋಗೇಶ್ (35) ಆರು ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮೊದಲು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಹಾಗೂ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರ ಚಿಕಿತ್ಸೆ ಬಳಿಕವೂ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆ ಮತ್ತೆ ನಗರದ ಹಿಮ್ಸ್‌ಗೆ ದಾಖಲಿಸಲಾಗಿತ್ತು.

ವೈದ್ಯಕೀಯ ಪರೀಕ್ಷೆಗಳ ನಂತರ ಯೋಗೇಶ್ ಮಿದುಳು ನಿಷ್ಕ್ರಿಯವಾಗಿರುವುದು ದೃಢಪಟ್ಟಿತ್ತು. ಈ ದುಃಖದ ಕ್ಷಣದಲ್ಲೂ ಪೋಷಕರು ಮಹತ್ವದ ನಿರ್ಧಾರ ತೆಗೆದುಕೊಂಡು ಮಗನ ಲಿವರ್ ಹಾಗೂ ಹೃದಯದ ವಾಲ್ವ್‌ಗಳನ್ನು ದಾನ ಮಾಡಲು ಒಪ್ಪಿದರು. ಅಂಗಾಂಗಗಳನ್ನು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್‌ ಮೂಲಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.

ADVERTISEMENT

ಪೋಷಕರ ನಿರ್ಣಯದಿಂದ ಅನೇಕ ರೋಗಿಗಳಿಗೆ ಆಶಾಭಾವನೆ ಮೂಡಿದ್ದು, ಸಮಾಜಕ್ಕೆ ಮಾನವೀಯತೆ ಸಂದೇಶ ನೀಡಿದ್ದಾರೆ ಎಂದು ವೈದ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಗಾಂಗ ದಾನಿ ಯೋಗೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.