ADVERTISEMENT

ಕೇಬಲ್‌ ಆಪರೇಟರ್‌ಗಳ ಪ್ರತಿಭಟನೆ

ಗ್ರಾಹಕ ವಿರೋಧಿ ನೀತಿ: ಆರೋಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 13:45 IST
Last Updated 15 ಡಿಸೆಂಬರ್ 2018, 13:45 IST
ಹಾಸನದಲ್ಲಿ ಎಚ್‌ಸಿಎನ್‌ ಕೇಬಲ್‌ ವೆಲ್‌ಫೇರ್‌ ಯೂನಿಯನ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹಾಸನದಲ್ಲಿ ಎಚ್‌ಸಿಎನ್‌ ಕೇಬಲ್‌ ವೆಲ್‌ಫೇರ್‌ ಯೂನಿಯನ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು.   

ಹಾಸನ: ‘ಟಿ.ವಿ ಕೇಬಲ್ ಸಂಪರ್ಕ ಸಂಬಂಧ ಕೇಂದ್ರ ಸರ್ಕಾರ ಟ್ರಾಯ್‌ ಮೂಲಕ ಜಾರಿಗೆ ತಂದಿರುವ ನಿಯಮಗಳು ಗ್ರಾಹಕ ವಿರೋಧಿಯಾಗಿದೆ’ ಎಂದು ಆರೋಪಿಸಿ ಎಚ್ ಸಿಎನ್ ಕೇಬಲ್ ವೆಲ್ ಫೇರ್ ಯೂನಿಯನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ವೃತ್ತದಿಂದ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮನವಿ ಸಲ್ಲಿಸಲಾಯಿತು.

‘ಈವರೆಗೆ ಯಾವುದೇ ಶುಲ್ಕ ಪಾವತಿಸಿಕೊಳ್ಳದೇ ನೀಡುತ್ತಿದ್ದ ಕೆಲ ಚಾನೆಲ್ ಗಳಿಗೂ ನೂತನ ನಿಯಮದ ಪ್ರಕಾರ ಶುಲ್ಕ ಪಾವತಿಸಬೇಕಿರುವುದು ಗ್ರಾಹಕರಿಗೆ ಹೊರೆಯಾಗಲಿದೆ. ಅಲ್ಲದೇ ಸ್ಥಳೀಯ ಆಪರೇಟರ್ ಗಳಿಗೂ ತೊಂದರೆಯಾಗಲಿದೆ’ ಎಂದು ದೂರಿದರು.

ADVERTISEMENT

‘ಕೇಬಲ್ ಸಂಪರ್ಕಕ್ಕಾಗಿ ತೆರಿಗೆ ಸೇರಿದಂತೆ ಕನಿಷ್ಠ ₹ 154 ಶುಲ್ಕವನ್ನು ಗ್ರಾಹಕರು ಪಾವತಿಸಬೇಕಿದ್ದು, ಅವರ ಆಯ್ಕೆಯ ಚಾನೆಲ್ ಗಳು ಒಳಗೊಂಡರೆ ಚಾಲ್ತಿ ದರಕ್ಕಿಂತ ದುಪ್ಪಟ್ಟು ಕೇಬಲ್ ಶುಲ್ಕವನ್ನು ಅನಿವಾರ್ಯವಾಗಿ ಪಾತಿಸಬೇಕಾಗಿದೆ. ಇದರಿಂದ ಗ್ರಾಹಕರಿಗೆ ಜೇಬಿಗೆ ಕತ್ತರಿ ಬೀಳಲಿದೆ’ ಎಂದು ಆರೋಪಿಸಿದರು.

‘ಈ ನಿಯಮದ ಪ್ರಕಾರ ಸ್ಥಳೀಯ ಕೇಬಲ್ ಆಪರೇಟರ್ ಗಳು ಶೇಕಡಾ 10ರಷ್ಟು ಹಣ ಪಡೆದು ಬಳಸುವ ಚಾನೆಲ್‌ ಗಳ ನಿರ್ವಹಣೆ ತುಂಬಾ ಕಷ್ಟ ಆಗಲಿದೆ. ಟ್ರಾಯ್‌ ನ ನಿರ್ಧಾರ ಅವೈಜ್ಞಾನಿಕವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರದ ಈ ನಿರ್ಧಾರದಿಂದ ಬಂಡವಾಳಶಾಹಿಗಳಿಗೆ ಲಾಭವಾಗಲಿದ್ದು, ಬಡ ಗ್ರಾಹಕರಿಗೆ ಆರ್ಥಿಕ ಹೊರೆ ಬೀಳಲಿದೆ. ಇದುವರೆಗೂ ಅನ್ಯ ಭಾಷೆಗಳು ಸೇರಿದಂತೆ ಕ್ರೀಡೆ ಹಾಗೂ ಇತರೆ 250 ಚಾನೆಲ್‌ಗಳನ್ನು ಕನಿಷ್ಟ ಪ್ಯಾಕೇಜ್ ನಲ್ಲಿ ಗ್ರಾಹಕರಿಗೆ ನೀಡಲಾಗುತ್ತಿತ್ತು. ಆದರೆ ನೂತನ ನೀತಿಯಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಹಾಗಾಗಿ ಮತ್ತೊಮ್ಮೆ ಪರಾಮರ್ಶಿಸಿ ಈ ಹಿಂದಿನಂತೆ ಉದ್ಯಮ ನಡೆಯಲು ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ವೆಲ್ ಫೇರ್ ಯೂನಿಯನ್ ಅಧ್ಯಕ್ಷ ಮಂಜೇಶ್, ಕಾರ್ಯದರ್ಶಿ ಎಂ.ಎಸ್ ಚಂದ್ರಶೇಖರ್, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಗಿರೀಶ್, ಸತೀಶ್ ಪಟೇಲ್,ಮಲ್ಲಿಕ್, ಚನ್ನಕೇಶವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.