ADVERTISEMENT

ಹಾಸನ | ಬರೀ ಗುಣಗಾನ: ಶಿವಲಿಂಗೇಗೌಡರಿಗೆ ಸಿಗದ ವಾಗ್ದಾನ

ಸಚಿವ ಸ್ಥಾನಕ್ಕೆ 2028ರವರೆಗೆ ಕಾಯುವುದು ಅನಿವಾರ್ಯ: ಶಿವಲಿಂಗೇಗೌಡರಿಗೆ ಪರೋಕ್ಷ ಸಂದೇಶ

ಚಿದಂಬರಪ್ರಸಾದ್
Published 29 ಜುಲೈ 2025, 5:54 IST
Last Updated 29 ಜುಲೈ 2025, 5:54 IST
ಅರಸೀಕೆರೆ ಸಮಾವೇಶದಲ್ಲಿ ಬೆಂಬಲಿಗರ ಒತ್ತಾಯಕ್ಕೆ ಬೇಸತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ನಿಲ್ಲಿಸಿದ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್‌, ಶಾಸಕ ಶಿವಲಿಂಗೇಗೌಡ ಜನರಿಗೆ ಸುಮ್ಮನೆ ಕೂರುವಂತೆ ಸೂಚಿಸಿದರು. ಇನ್ನೊಂದೆಡೆ ಸಚಿವ ಕೆ.ಎನ್‌. ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿದರು
ಅರಸೀಕೆರೆ ಸಮಾವೇಶದಲ್ಲಿ ಬೆಂಬಲಿಗರ ಒತ್ತಾಯಕ್ಕೆ ಬೇಸತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ನಿಲ್ಲಿಸಿದ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್‌, ಶಾಸಕ ಶಿವಲಿಂಗೇಗೌಡ ಜನರಿಗೆ ಸುಮ್ಮನೆ ಕೂರುವಂತೆ ಸೂಚಿಸಿದರು. ಇನ್ನೊಂದೆಡೆ ಸಚಿವ ಕೆ.ಎನ್‌. ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿದರು   

ಹಾಸನ: ಬಹು ನಿರೀಕ್ಷೆಯನ್ನು ಇಟ್ಟುಕೊಂಡು ಅರಸೀಕೆರೆಯಲ್ಲಿ ಕಾಂಗ್ರೆಸ್‌ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದ ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡರಿಗೆ ತಕ್ಕಮಟ್ಟಿಗೆ ನಿರಾಸೆ ಅನುಭವಿಸುವಂತಾಗಿದೆ.

ಕ್ಷೇತ್ರದ ಜನರ ಎದುರು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿಯಿಂದ ಸಚಿವ ಸ್ಥಾನದ ಭರವಸೆ ಪಡೆಯುವ ಹುಮ್ಮಸ್ಸಿನಲ್ಲಿದ್ದ ಶಿವಲಿಂಗೇಗೌಡರು, ಯಾವುದೇ ವಾಗ್ದಾನಗಳು ಸಿಗದೇ ಸುಮ್ಮನಿರಬೇಕಾಗಿದೆ.

ಅಂದಾಜು ₹ 570 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ನೆಪದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಶಿವಲಿಂಗೇಗೌಡರು ಈ ಸಮಾವೇಶ ಆಯೋಜಿಸಿದ್ದರು. ಮೇಲ್ನೋಟಕ್ಕೆ ಸರ್ಕಾರಿ ಕಾರ್ಯಕ್ರಮ ಎಂದು ಬಿಂಬಿಸಿದರೂ, ಇದೊಂದು ಪಕ್ಷದ ಸಮಾವೇಶವೇ ಆಗಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ADVERTISEMENT

ಆರಂಭದಲ್ಲಿಯೇ ಶಿವಲಿಂಗೇಗೌಡರು ನಿರಾಸೆ ಅನುಭವಿಸುವಂತಾಯಿತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಬಹುತೇಕ ಸದಸ್ಯರು ಬರುವುದಾಗಿ ಹೇಳಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಸತಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಅವರನ್ನು ಬಿಟ್ಟರೆ ಬೇರ‍್ಯಾವ ಸಚಿವರೂ ಭಾಗವಹಿಸಲಿಲ್ಲ.

ಇದಾದ ನಂತರ ಸಮಾವೇಶದುದ್ದಕ್ಕೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಹಾಡಿ ಹೊಗಳಿದ ಶಿವಲಿಂಗೇಗೌಡರು, ತಮ್ಮ ಕ್ಷೇತ್ರಕ್ಕೆ ಆಗಬೇಕಿರುವ ಕೆಲಸಗಳ ಪಟ್ಟಿಯನ್ನೂ ಮುಂದಿಟ್ಟರು. ತಮ್ಮ ಭಾಷಣದಲ್ಲಿ ಸಂಸದ ಶ್ರೇಯಸ್‌ ಪಟೇಲ್‌ ಕೂಡ, ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡಿದರು.

ಆದರೆ, ಭಾಷಣ ಆರಂಭಿಸಿದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು, ಶಿವಲಿಂಗೇಗೌಡರಿಗೆ ಸಚಿವ ಸ್ಥಾನದ ಭರವಸೆಯನ್ನು ಕೊಡಲೇ ಇಲ್ಲ. ‘ಶಿವಲಿಂಗೇಗೌಡರಿಗೆ ಸಚಿವರಾಗುವ ಎಲ್ಲ ಆರ್ಹತೆ ಇದೆ’ ಎಂದಷ್ಟೇ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಈಗಾಗಲೇ ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದೀರಿ. 2028ರಲ್ಲಿಯೂ ಇದೇ ರೀತಿ ಗೆಲ್ಲಿಸಿ’ ಎನ್ನುವ ಮೂಲಕ ಸಚಿವ ಸ್ಥಾನಕ್ಕೆ 2028ರವರೆಗೆ ಕಾಯುವಂತೆ ಪರೋಕ್ಷ ಸಂದೇಶವನ್ನೂ ರವಾನಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡ, ಶಿವಲಿಂಗೇಗೌಡರನ್ನು ಹಾಡಿ ಹೊಗಳಿದರೆ ಹೊರತು, ಸಚಿವ ಸ್ಥಾನದ ಬಗ್ಗೆ ಚಕಾರವನ್ನೂ ಎತ್ತಲಿಲ್ಲ. ಕಾರ್ಯಕರ್ತರು ಸಚಿವ ಸ್ಥಾನ ನೀಡುವಂತೆ ಕೂಗುತ್ತಿದ್ದರೂ, ‘ಅವರ ಮೇಲೆ ನಿಮ್ಮ ಅಭಿಮಾನ ಇದೇ ರೀತಿ ಇರಲಿ’ ಎಂದಷ್ಟೇ ಹೇಳಿ ಜಾರಿಕೊಂಡರು.

ಅನ್ಯ ಕ್ಷೇತ್ರಗಳ ಮುಖಂಡರ ಕೆಂಗಣ್ಣು

ಜಿಲ್ಲೆಯಿಂದ ಗೆದ್ದಿರುವ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಈಗಾಗಲೇ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಜೊತೆಗೆ ಕೇಳಿದಷ್ಟು ಅನುದಾನವನ್ನೂ ಕೊಡಲಾಗುತ್ತಿದೆ. ಇದರ ಜೊತೆಗೆ ಸಚಿವರನ್ನಾಗಿ ಮಾಡಿದರೆ ಅನ್ಯ ಕ್ಷೇತ್ರಗಳ ಮುಖಂಡರ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ ಎನ್ನುವ ಆತಂಕವೂ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಲ್ಲಿ ಕಾಣುತ್ತಿತ್ತು. ಹುಡಾ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಶಿವಲಿಂಗೇಗೌಡರ ಮಾತು ಕೇಳಿ ಈಗಾಗಲೇ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇನ್ನು ಅವರನ್ನು ಸಚಿವರನ್ನಾಗಿ ಮಾಡಿದರೆ ಜಿಲ್ಲೆಯ ಇತರ ಕ್ಷೇತ್ರಗಳ ಮುಖಂಡರೂ ಮುನಿಸಿಕೊಳ್ಳಬಹುದು ಎಂಬ ಮುನ್ನೆಚ್ಚರಿಕೆ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಯಾವುದೇ ವಾಗ್ದಾನ ನೀಡದೇ ತೆರಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಿವಲಿಂಗೇಗೌಡರಿಗೆ ಸಚಿವರಾಗುವ ಅರ್ಹತೆ ಇದೆ. ಆದರೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್‌ ಹಾಗೂ ಸರ್ಕಾರ. ಅದನ್ನು ಬಹಿರಂಗವಾಗಿ ಚರ್ಚಿಸಲು ಆಗುವುದಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಶಿವಲಿಂಗೇಗೌಡರ ಆಸೆಯಂತೆ ಶಿಕ್ಷಣ ರಸ್ತೆ ನೀರು ನೀರಾವರಿ ಸೇರಿದಂತೆ ಜನರ ಬದುಕು ಹಸನು ಮಾಡಲು ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ.
-ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.