ADVERTISEMENT

ಹಾಸನ: ಸಮಾಜದ ಉನ್ನತಿಗೆ ಶ್ರಮಿಸಲು ಕರೆ

ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 13:39 IST
Last Updated 30 ಆಗಸ್ಟ್ 2021, 13:39 IST
ಹಾಸನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಹಾಸನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.   

ಹಾಸನ: ಶ್ರೀ ಕೃಷ್ಣನ ಸಂದೇಶಗಳನ್ನು ಅರ್ಥೈಸಿಕೊಳ್ಳುವುದರ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಶ್ರೀ ಕೃಷ್ಣಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಭಗವದ್ಗೀತೆ ಅಧ್ಯಯನಮಾಡಿದರೆ ಸಂಸ್ಕೃತಿ, ಸಂಸ್ಕಾರ ರೂಡಿಸಿಕೊಳ್ಳಬಹುದು. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ನಿವಾರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಭಗದ್ಗೀತೆಯಲ್ಲಿರುವ 18 ಅಧ್ಯಾಯಗಳು ಸರ್ವಕಾಲಕ್ಕೂ ಅನ್ವಯವಾಗುತ್ತದೆ. ಪ್ರತಿಯೊಬ್ಬರು ಅದನ್ನು ಅಭ್ಯಾಸ ಮಾಡಲು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿರಬೇಕು. ಶ್ರೀ ಕೃಷ್ಣ ಅನ್ಯಾಯ, ಅಧರ್ಮದ ವಿರುದ್ಧ ಹೋರಾಡಿ ಧರ್ಮ ರಕ್ಷಣೆಗಾಗಿ ಜನ್ಮತಾಳಿದವರು.ಅವರು ನಡೆದು ಬಂದ ಹಾದಿ ಅನುಸರಿಸಬೇಕು ಹಾಗೂ ಕೃಷ್ಣನ ಧೈರ್ಯಗಳು ಇಡೀ ಜಗತ್ತಿಗೆ ಜೀವನ ಪಾಠ ಹಾಗೂ ಜಿವನ ನಡೆಸುವುದರ ಬಗ್ಗೆ ತಿಳಿಸಿಕೊಡುತ್ತದೆ ಎಂದು ಹೇಳಿದರು.

ADVERTISEMENT

ಉಪನ್ಯಾಸಕಿ ಶಶಿಚಂದ್ರಕಲಾ ಮಾತನಾಡಿ, ಕೃಷ್ಣನ ಶ್ಲೋಕಗಳು, ವೇದ ವಾಕ್ಯಗಳಲ್ಲಿ ವಿಶೇಷ ಶಕ್ತಿ ಅಡಗಿದ್ದು, ಅದನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬಹುದು ಹಾಗೂ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದರು.

ಸೂರ್ಯ, ಚಂದ್ರ ಇರುವ ತನಕ ರಾಮಾಯಣ, ಮಹಾಭಾರತ, ಭಗವದ್ಗೀತೆ ಇದ್ದೆ ಇರುತ್ತದೆ. ಅವುಗಳಲ್ಲಿರುವ ಅಂಶಗಳನ್ನು ಸಮಾಜದ ಏಳಿಗೆಗಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

ಯಾದವ ಸಮಾಜದ ಮುಖಂಡ ಹೊನ್ನೇಗೌಡ ಮಾತನಾಡಿ, ಕೃಷ್ಣನ ಜೀನವ ಚರಿತ್ರೆಯಿಂದಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯ, ತ್ಯಾಗವನ್ನು ಅರ್ಥ ಮಾಡಿಕೊಳ್ಳಬಹುದು. ಮನುಷ್ಯನ ಜೀವನದಲ್ಲಿನಡೆಯುವ ಘಟನೆಗಳಿಗೆ ಕೃಷ್ಣನ ಅನುಗ್ರಹವಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ತಹಶೀಲ್ದಾರ್ ನಟೇಶ್, ಯಾದವ ಸಮಾಜದ ಜಿಲ್ಲಾಧ್ಯಕ್ಷ ನಾರಾಯಣ,ಉಪನ್ಯಾಸಕ ರಾಘವೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.