ADVERTISEMENT

ಬೋನಿಗೆ ಬಿದ್ದ ಗಂಡು ಚಿರತೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 13:32 IST
Last Updated 24 ಜನವರಿ 2021, 13:32 IST
ಸೆರೆಸಿಕ್ಕ ಚಿರತೆ
ಸೆರೆಸಿಕ್ಕ ಚಿರತೆ   

ಹೆತ್ತೂರು: ಬಿಸಿಲೆ ಸಮೀಪದ ಹೊನಾಟ್ಲು ಗ್ರಾಮದಲ್ಲಿ ಐದು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.

ಹೆತ್ತೂರು ಹೋಬಳಿಯಲ್ಲಿ ಚಿರತೆ ಹಾವಳಿ ಹಿನ್ನೆಲೆಯಲ್ಲಿ ನಾಲ್ಕು ಸ್ಥಳಗಳನ್ನು ಗುರುತಿಸಿ, ಹತ್ತು ದಿನದ ಹಿಂದೆ ಬೋನು ಇರಿಸಲಾಗಿತ್ತು. ಶನಿವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿರುವುದು, ಈ ಭಾಗದ ಜನರಿಗೆ ತುಸು ಸಮಾಧಾನ ತರಿಸಿದೆ.

‘ಸೆರೆ ಸಿಕ್ಕಿರುವ ಚಿರತೆಯನ್ನು ಮುತ್ತೂಡಿ ಅರಣ್ಯಕ್ಕೆ ಬಿಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಮೋಹನ್‌ ತಿಳಿಸಿದರು.

ADVERTISEMENT

ಹಲವು ತಿಂಗಳುಗಳಿಂದ ಹುದಿನೂರು, ಆನೆಗುಂಡಿ, ಮಾವನೂರು ಮಂಕನಹಳ್ಳಿ ಸುತ್ತಮುತ್ತ ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗಿ ನಾಯಿ, ಕರು, ಹಸು, ಕುರಿಗಳನ್ನು ತಿಂದು ಹಾಕಿತ್ತು. ರೈತರು ಜಮೀನುಗಳಿಗೆ ಹೋಗಲು ಭಯ ಪಡುತ್ತಿದ್ದರು.

‘ಬಿಸಿಲೆ ಅರಣ್ಯ ಪಟ್ಲಾ, ಮಂಕನಹಳ್ಳಿ, ಕುಮಾರ ಪರ್ವತ ಬೆಟ್ಟಕ್ಕೆ ಹೊಂದಿಕೊಂಡಿದೆ. ಸುತ್ತಮುತ್ತ ಬೆಟ್ಟಗುಡ್ಡ, ಕುರುಚಲು ಗಿಡ, ನೀಲಗಿರಿ ತೋಪು ಒಳಗೊಂಡಿದೆ. ಹೊರ ಜಿಲ್ಲೆಯಲ್ಲಿ ಸೆರೆ ಹಿಡಿದ ಚಿರತೆಗಳನ್ನು ಬಿಸಲೆ ಅರಣ್ಯಕ್ಕೆ ಬಿಡಲಾಗುತ್ತಿದೆ. ಅವುಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು’ ಎಂದು ಬಿಸಲೆ ಅರಣ್ಯ ಭವನದ ಮುಂದೆ ಕೆಲ ದಿನಗಳ ಹಿಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ನರಸಿಂಹ ಮೂರ್ತಿ, ವಿಜಯ ಕುಮಾರ್, ಸೋಮಶೇಖರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.