ADVERTISEMENT

ಸಕಲೇಶಪುರ: ಅತ್ತಿಹಳ್ಳಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಗುಂಡೇಟಿನಿಂದ ಮೃತಪಟ್ಟಿರುವ ಸಾಧ್ಯತೆ: ಗ್ರಾಮಸ್ಥರ ಶಂಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 4:46 IST
Last Updated 1 ಮಾರ್ಚ್ 2021, 4:46 IST

ಸಕಲೇಶಪುರ: ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದ ಸಣ್ಣಿಕಲ್ಲು ಬಳಿ ಕಾಡಾನೆ ಕಳೇಬರ ಕೊಳೆತ ಸ್ಥಿತಿಯಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ಎರಡು ವಾರಗಳ ಹಿಂದೆ ಆನೆ ಸತ್ತಿರಬಹುದು ಎನ್ನಲಾಗಿದ್ದು, ಗ್ರಾಮಸ್ಥರು ನೋಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಯಸಳೂರು ವಲಯ ಅರಣ್ಯಾಧಿಕಾರಿ ಮೋಹನ್‌ ಹಾಗೂ ಸಿಬ್ಬಂದಿ ವೈದ್ಯರೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಮೆಟಲ್‌ ಡಿಟೆಕ್ಟರ್‌(ಲೋಹ ಶೋಧಕ) ತರಿಸಿ ಆನೆ ದೇಹದೊಳಗೆ ಗುಂಡು ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿದರು. ಆದರೆ, ಯಾವುದೇ ಗುಂಡು ಪತ್ತೆಯಾಗಿಲ್ಲ.

ADVERTISEMENT

ಮ‌ರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ವ‌ರದಿ ನೀಡಿದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯುತ್ತದೆ ಎಂದು ವಲಯ ಅರಣ್ಯಾಧಿಕಾರಿ ಮೋಹನ್ ತಿಳಿಸಿದರು.

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಡಾ. ಬಸವರಾಜು ಸಹ ಭೇಟಿ ನೀಡಿ ಪರಿಶೀಲಿಸಿದರು.

ಕ್ರಮಕ್ಕೆ ಆಗ್ರಹ: ಒಂದು ‌ತಿಂಗಳ ಹಿಂದಷ್ಟೇ ಯಸಳೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆಯಾಗಿತ್ತು. ಅದು ಗುಂಡೇಟಿನಿಂದಲೇ ಮೃತಪಟ್ಟಿದ್ದರೂ ಅರಣ್ಯ ಇಲಾಖೆ ಸರಿಯಾಗಿ ತನಿಖೆ ನಡೆಸಲಿಲ್ಲ. ಅತ್ತಿಹಳ್ಳಿಯಲ್ಲಿ ಪತ್ತೆಯಾಗಿರುವ ಕಾಡಾನೆ ಸಹ ಗುಂಡೇಟಿನಿಂದಲೇ ಮೃತಪಟ್ಟಿರುವ ಸಾಧ್ಯತೆ ಹೆಚ್ಚಿದೆ’ ಎಂದು ಮಲೆನಾಡು ಹೋರಾಟ ಸಮಿತಿ ಅಧ್ಯಕ್ಷ ಎಚ್‌.ಎಂ. ಕಿಶೋರ್‌ ಅನುಮಾನ ವ್ಯಕ್ತಪಡಿಸಿದರು.

‘ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಆನೆ ಸಾವಿಗೆ ಕಾರಣ ಪತ್ತೆ ಹಚ್ಚಬೇಕು’ ಎಂದು ಪರಿಸರ ಪ್ರೇಮಿ ಗೊದ್ದು ಉಮೇಶ್‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.