ADVERTISEMENT

ಕಾರ್ಟೂನ್‌ ಕಲರವ, ಕೊಡಗು ನೆರೆ ಸಂತ್ರಸ್ತರಿಗೆ ಮಿಡಿದ ವ್ಯಂಗ್ಯಚಿತ್ರಕಾರರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 12:55 IST
Last Updated 14 ಅಕ್ಟೋಬರ್ 2018, 12:55 IST
ಹಾಸನದಲ್ಲಿ ಏರ್ಪಡಿಸಿದ್ದ ಕಾರ್ಟೂನ್‌ ಕಲರವ ಕಾರ್ಯಕ್ರಮದಲ್ಲಿ ವಂಗ್ಯಚಿತ್ರಕಾರ ಗುಜ್ಜಾರಪ್ಪ ಅವರು ಅಶೋಕ್ ಹಾರನಹಳ್ಳಿ ಚಿತ್ರ ಬಿಡಿಸಿದರು.
ಹಾಸನದಲ್ಲಿ ಏರ್ಪಡಿಸಿದ್ದ ಕಾರ್ಟೂನ್‌ ಕಲರವ ಕಾರ್ಯಕ್ರಮದಲ್ಲಿ ವಂಗ್ಯಚಿತ್ರಕಾರ ಗುಜ್ಜಾರಪ್ಪ ಅವರು ಅಶೋಕ್ ಹಾರನಹಳ್ಳಿ ಚಿತ್ರ ಬಿಡಿಸಿದರು.   

ಹಾಸನ: ರಾಜ್ಯ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ರೋಟರಿ ಕ್ಲಬ್ ವತಿಯಿಂದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ದಿವ್ಯ ಚೈತನ್ಯ ಮಂದಿರದಲ್ಲಿ ಏರ್ಪಡಿಸಿದ್ದ ಸ್ಥಳದಲ್ಲೇ ವ್ಯಂಗ್ಯಭಾವ ಚಿತ್ರ ಬಿಡಿಸುವ ಹಾಗೂ ಕಾರ್ಟೂನ್ ಕಲರವಕ್ಕೆ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಚಾಲನೆ ನೀಡಿದರು.

ಕೊಡಗು ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ವ್ಯಂಗ್ಯಭಾವಚಿತ್ರಕ್ಕೆ ನೂರು ರೂಪಾಯಿ ಪಡೆಯಲಾಯಿತು. ಕೆಲವರಿಗೆ ಉಚಿತವಾಗಿ ಭಾವಚಿತ್ರ ಬಿಡಿಸಿಕೊಡಲಾಯಿತು.

ಬೆಂಗಳೂರು, ಮಂಗಳೂರಿನಿಂದ ಬಂದಿದ್ದ ಹತ್ತಕ್ಕೂ ಅಧಿಕ ವ್ಯಂಗ್ಯಚಿತ್ರಕಾರರು ಸ್ಥಳದಲ್ಲೇ ವ್ಯಂಗ್ಯ ಭಾವಚಿತ್ರ ಬಿಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ADVERTISEMENT

ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ನೂರು ರೂಪಾಯಿ ಪಾವತಿಸಿ ತಮ್ಮ ವ್ಯಂಗ್ಯ ಭಾವಚಿತ್ರ ಪಡೆದರು. ಕಾರ್ಟೂನ್ ಕಲರವ ಅಂಗವಾಗಿ ದಿವ್ಯ ಚೈತನ್ಯ ಮಂದಿರದಲ್ಲಿ ಪ್ರದರ್ಶಿಸಿದ ವ್ಯಂಗ್ಯಚಿತ್ರಗಳು ಕಣ್ಮನ ಸೆಳೆದವು. ರಾಜಕೀಯ ವಿದ್ಯಮಾನ, ಷೇರುಪೇಟೆ, ಆರ್ಥಿಕ ಪರಿಸ್ಥಿತಿ ಕುರಿತ ಚಿತ್ರಗಳು ಆಕರ್ಷಿಸಿದವು.

ಅಧ್ಯಕ್ಷತೆ ವಹಿಸಿದ್ದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ವ್ಯಂಗ್ಯಚಿತ್ರಗಳಿಗೆ ಮಹತ್ವದ ಸ್ಥಾನವಿದೆ. ನೂರಾರು ಪದಗಳು ಹೇಳುವ ಸಂದೇಶವನ್ನು ಒಂದು ವ್ಯಂಗ್ಯಚಿತ್ರ ಅರ್ಥಗರ್ಭಿತವಾಗಿ ಹೇಳುತ್ತದೆ. ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಿತ್ತರವಾಗುವ ವ್ಯಂಗ್ಯಚಿತ್ರಗಳು ಸಾಕಷ್ಟು ಜನರ ಗಮನ ಸೆಳೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಮಾರಂಭ ಉದ್ಘಾಟಿಸಿದ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಮಾತನಾಡಿ, ‘ಕೊಡಗು ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಪತ್ರಿಕೆಯಲ್ಲಿ ಬರೆಯುವ ರಾಜಕೀಯ ವಿಶ್ಲೇಷಣೆಯಲ್ಲಿ ಜನಪ್ರತಿನಿಧಿಗಳು ಹಾಗೂ ಗಣ್ಯರ ವ್ಯಂಗ್ಯಚಿತ್ರವನ್ನು ಬಳಸಿಕೊಳ್ಳಲಾಗುತ್ತದೆ’ ಎಂದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಉಪಾಧ್ಯಕ್ಷ ಆರ್.ಟಿ.ದ್ಯಾವೇಗೌಡ, ಆರ್.ಶೇಷಗಿರಿ, ಕಾಲೇಜು ಪ್ರಾಂಶುಪಾಲ ಡಾ.ಕೆ.ಎಸ್.ಜಯಂತ್, ವ್ಯಂಗ್ಯಚಿತ್ರಕಾರರ ಸಂಘದ ರಾಜ್ಯಾಧ್ಯಕ್ಷ ವಿಆರ್ ಸಿ ಶೇಖರ್, ಗುಜ್ಜಾರಪ್ಪ, ಮನೋಹರ್ ಆಚಾರ್ಯ, ಸುಬ್ರಹ್ಮಣ್ಯ, ನಟರಾಜ್, ವಸಂತ ಹೊಸಬೆಟ್ಟು, ರಘುಪತಿ ಶೃಂಗೇರಿ,ರಮೇಶ್ ಬಾಬು, ನಾಗನಾಥ್, ನಂಜುಂಡಸ್ವಾಮಿ, ಗೌರಿ ವೆಲ್ಲಾಳ, ಎಂ.ವಿ.ಶಿವರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.