ADVERTISEMENT

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದವರ ವಿರುದ್ಧ ಪ್ರಕರಣ

ಸಕಲೇಶಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:09 IST
Last Updated 1 ನವೆಂಬರ್ 2025, 4:09 IST
ಸಕಲೇಶಪುರ ಪುರಸಭೆಯಲ್ಲಿ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು
ಸಕಲೇಶಪುರ ಪುರಸಭೆಯಲ್ಲಿ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು   

ಸಕಲೇಶಪುರ: ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪುರಸಭಾ ಸದಸ್ಯ ಎಸ್‌.ಡಿ. ಆದರ್ಶ ಆಗ್ರಹಿಸಿದರು.

ಪುರಸಭಾ ಕಚೇರಿಯಲ್ಲಿ ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಹಳೆ ಸಂತವೇರಿ ಬಡಾವಣೆಯಲ್ಲಿ ಕೆಲವು ನಿವಾಸಿಗಳು, ಹೋಟೆಲ್‌ನವರು ವಾಹನಗಳಲ್ಲಿ ತ್ಯಾಜ್ಯವನ್ನು ರಸ್ತೆಯ ಮೇಲೆ ಎಸೆದು ಹೋಗುತ್ತಿದ್ದಾರೆ. ಇವುಗಳನ್ನು ನಾಯಿಗಳು ಎಳೆದಾಡಿ, ರಸ್ತೆ ತುಂಬೆಲ್ಲಾ ದುರ್ವಾಸನೆ ಬೀರುತ್ತಿರುತ್ತದೆ. ಕಸ ಸುರಿಯುವ ಇಂತಹ ಅನಾಗರೀಕರಿಗೆ ದಂಡ ವಿಧಿಸಿದರೆ ಸಾಲದು, ಅವರ ಮೇಲೆ ಪ್ರಕರಣ ದಾಖಲು ಮಾಡಬೇಕು’ ಎಂದು ಆಗ್ರಹಿಸಿದರು.

‘ಮಲ್ಲಿಕಾರ್ಜುನ ನಗರ ಬಡಾವಣೆ, ನ್ಯಾಯಾಲಯ ಅಕ್ಕಪಕ್ಕ, ರೋಟರಿ ಆಂಗ್ಲ ಶಾಲೆ ಹತ್ತಿರ, ಆಚಂಗಿ, ಒಕ್ಕಲಿಗರ ಕಲ್ಯಾಣ ಮಂಟಪ ಸೇರಿದಂತೆ ಪ್ರತಿಯೊಂದು ವಾರ್ಡ್‌ಗಳಲ್ಲಿಯೂ ಕಸ ಎಸೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಕಸ ಸಂಗ್ರಹ ಮಾಡುವ ಆಟೋಗಳಲ್ಲಿಯೂ ಜಾಗೃತಿ ಮೂಡಿಸುತ್ತಿದ್ದರೂ ಇದು ಕಡಿಮೆಯಾಗಿಲ್ಲ. ಕಠಿಣ ಕ್ರಮ ಅಗತ್ಯ’ ಎಂದರು.

ADVERTISEMENT

ರಸ್ತೆ ಬದಿಯಲ್ಲಿ ಹೆಚ್ಚು ಕಸ ಹಾಕುವ ಸ್ಥಳಗಳಲ್ಲಿ ಪುರಸಭೆಯಿಂದಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಲ್ಲದೇ ಆಸುಪಾಸಿನಲ್ಲಿ ಇರುವ ಸಿಸಿಟಿವಿ ಕ್ಯಾಮೆರಾಗಳ ವಿಡಿಯೋಗಳನ್ನು ಸಂಗ್ರಹಿಸಿ ಕಸ ಹಾಕಿದವರ ಮನೆ ಬಾಗಿಲಿಗೆ ಕಸ ಹಾಕಬೇಕು. ಅಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲಿ ಪುರಸಭೆಯಿಂದಲೇ ಅಂತವರ ವಿಡಿಯೊಗಳನ್ನು ಪ್ರಸಾರ ಮಾಡಿ ಅವರ ಮರ್ಯಾದೆ ತೆಗೆಯಬೇಕು’ ಎಂದು ಸಿಟ್ಟಾದರು.

‘ಮನೆ ಮನೆ ಕಸ ಸಂಗ್ರಹ ಮಾಡುವ ಆಟೋಗಳು ಕೆಲವು ವಾರ್ಡ್‌ಗಳಿಗೆ ಹೋದರೆ ಕೆಲ ಕಾಲ ನಿಲ್ಲುವುದಿಲ್ಲ. ಹಾಡುಗಳನ್ನು ಹಾಕಿಕೊಂಡು ರಸ್ತೆಯಲ್ಲಿ ನೇರವಾಗಿ ಹೋಗುತ್ತವೆ ಎಂಬ ಆರೋಪವೂ ಇದ್ದು, ಪ್ರತಿಯೊಬ್ಬರ ಮನೆ, ಅಂಗಡಿಗಳಲ್ಲಿ ಕಡ್ಡಾಯವಾಗಿ ಕಸ ಸಂಗ್ರಹ ಆಗಬೇಕು. ವಾಹನ ಬಂದಿಲ್ಲ ಎಂಬ ಆರೋಪ ಯಾರಿಂದಲೂ ಬರದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದರು.

ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಒಕ್ಕೋರಲಿನಿಂದ ಬೆಂಬಲ ಸೂಚಿಸಿದರು.

ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್, ಉಪಾಧ್ಯಕ್ಷೆ ಝರೀನಾ, ಮುಖ್ಯಾಧಿಕಾರಿ ಮಹೇಶ್ವರಪ್ಪ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.