ಸಾಂದರ್ಭಿಕ ಚಿತ್ರ
ಹಾಸನ: ‘ಸರ್ಕಾರದಿಂದ ಹಮ್ಮಿಕೊಂಡಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ಅಸಮರ್ಪಕವಾಗಿದ್ದು, ಮರುಗಣತಿ ಅಥವಾ ಪುನರ್ ಪರಿಶೀಲನೆಗೆ ಕ್ರಮ ಕೈಗೊಳ್ಳಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಭುವನಾಕ್ಷ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ, ಇಸ್ಲಾಂ, ಕ್ರೈಸ್ತ ಸೇರಿದಂತೆ ಹನ್ನೊಂದು ಆಯ್ಕೆಗಳನ್ನು ನೀಡಲಾಗಿದೆ. ಆದರೆ ನಮ್ಮ ಲಿಂಗಾಯತ ಧರ್ಮದ ಆಯ್ಕೆಯನ್ನು ಕೈಬಿಡಲಾಗಿದ್ದು, ಇದರಿಂದ ಗೊಂದಲ ಸೃಷ್ಟಿಯಾಗಿದೆ’ ಎಂದು ಆರೋಪಿಸಿದರು.
ಇದೀಗ ವೀರಶೈವ –ಲಿಂಗಾಯತ ಜಾತಿಯವರು ಹಿಂದೂ ಧರ್ಮ ಎಂದು ನಮೂದಿಸಿದರೆ, ನಮಗೆ ಸಿಗಬೇಕಾದ ಅನೇಕ ಸವಲತ್ತುಗಳು ದೊರೆಯುವುದಿಲ್ಲ. ಲಿಂಗಾಯತ ಧರ್ಮವಾಗಿ ಆಯ್ಕೆ ಮಾಡಿದರೆ, ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಮಕ್ಕಳಿಗೆ ಶೇ 50ರಷ್ಟು ಮೀಸಲಾತಿ ದೊರೆಯುತ್ತದೆ. ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿದೆ. ಉದ್ಯೋಗ ತರಬೇತಿ, ಶಾಲಾ-ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಸ್ಥಾಪಿಸಬಹುದಾಗಿದೆ. ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ಪರೀಕ್ಷೆಗಳಲ್ಲಿ ಸರ್ಕಾರದ ವತಿಯಿಂದ ತರಬೇತಿ ಇತ್ಯಾದಿ ಸೌಲಭ್ಯ ದೊರೆಯಲಿದೆ. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸುವಂತೆ ಮನವಿ ಮಾಡಿದರು.
ಲಿಂಗಾಯತ ಧರ್ಮದ ಆಯ್ಕೆಯನ್ನು ಗಣತಿಯಲ್ಲಿ ನೀಡಲಾಗಿಲ್ಲ. ಆದ್ದರಿಂದ ಸರ್ಕಾರ ಪುನರ್ ಪರಿಶೀಲಿಸಿ ಗಣತಿಗೆ ಮರು ಚಾಲನೆ ನೀಡಬೇಕು. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಲೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವವರು ಧರ್ಮದ ಎಂಟನೇ ಕಾಲಂನ ಕ್ರಮ ಸಂಖ್ಯೆ 11ರಲ್ಲಿನ ಇತರೆ ಎಂಬ ಜಾಗದಲ್ಲಿ ಲಿಂಗಾಯತ ಧರ್ಮ ಎಂದು, ಜಾತಿ ಲಿಂಗಾಯತ ಎಂದು ಉಪಜಾತಿ ಕಾಲಂನಲ್ಲಿ ನಿಮ್ಮ ಉಪಜಾತಿಯನ್ನು ಬರೆಯುವಂತೆ ಮನವಿ ಮಾಡಿದರು.
ಒಂಬೇಶ್, ಲತೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.