
ಸಕಲೇಶಪುರದ ಬಾಗೆ ಗ್ರಾಮದ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸಿಬಿಎಸ್‌ಇ ಕ್ರೀಡಾಕೂಟದಲ್ಲಿ ಹಾಸನದ ಹೇಮಗಂಗೋತ್ರಿ ಪ್ರಾಧ್ಯಾಪಕ ಹಾಲಪ್ಪ ಆರ್. ಗಜೇರ ಕ್ರೀಡಾ ಜ್ಯೋತಿಗೆ ಚಾಲನೆ ನೀಡಿದರು
ಸಕಲೇಶಪುರ: ‘ಪುಸ್ತಕವನ್ನು ತಲೆತಗ್ಗಿಸಿ ಓದಿದರೆ, ಅದು ತಲೆ ಎತ್ತಿ ನೋಡುವಂತೆ ಮಾಡುತ್ತದೆ. ಮೊಬೈಲ್‌ಗಳನ್ನು ತಲೆ ತಗ್ಗಿಸಿ ನೋಡಿದರೆ, ಅದು ತಲೆ ತಗ್ಗುವಂತೆ ಮಾಡುತ್ತದೆ’ ಎಂದು ಹಾಸನದ ಹೇಮಗಂಗೋತ್ರಿ ಪ್ರಾಧ್ಯಾಪಕ ಹಾಲಪ್ಪ ಆರ್. ಗಜೇರ ಹೇಳಿದರು.
ತಾಲ್ಲೂಕಿನ ಬಾಗೆ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಸಿಬಿಎಸ್‌ಇ ಶಾಲೆಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು. ‘ಇಂದು ವಿದ್ಯಾರ್ಥಿಗಳಲ್ಲಿ ಪುಸ್ತಕದ ವಿಷಯ ಹೊರತುಪಡಿಸಿ ಬಾಹ್ಯ ವಿಚಾರಗಳೇ ತಲೆಯಲ್ಲಿ ಇಲ್ಲ. ಮನೆಯಲ್ಲಿ ಅಪ್ಪನ ದುಡಿಮೆ, ಅಮ್ಮನ ಕೆಲಸ, ಕುಟುಂಬದ ಸಂಬಂಧಗಳು, ಸಮಾಜದ ದೈನಂದಿನ ಆಗುಹೋಗುಗಳು, ಪರಿಸರ, ನೈರ್ಮಲ್ಯ ಇಂತಹ ವಿಚಾರಗಳ ಬಗ್ಗೆ ಚರ್ಚೆಯಾಗಲಿ, ತಿಳಿದುಕೊಳ್ಳುವ ಆಸಕ್ತಿಯೂ ಕಾಣುತ್ತಿಲ್ಲ. ಮಕ್ಕಳು ಮಾತ್ರವಲ್; ಬಹುತೇಕರು ಭಾವನೆಗಳೇ ಇಲ್ಲದ ಯಂತ್ರಗಳಂತೆ ಬದುಕುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ಕಾಲಗಟ್ಟದಲ್ಲಿ ಪೋಷಕರು ಸಹ ಮೊಬೈಲ್ ಬಳಕೆಯನ್ನು ಬದಿಗಿಟ್ಟು, ತಮ್ಮ ಮಕ್ಕಳೊಂದಿಗೆ ಬೆರೆಯಬೇಕು. ಅವರನ್ನು ಈ ಸಮಾಜ, ಸಂಬಂಧಗಳ ಜೊತೆ ಬೆರೆಸಬೇಕು. ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಹಿತ್ಯ, ಕಲೆ, ಸಂಗೀತ ಇವುಗಳಿಗೆ ಹೆಚ್ಚಾಗಿ ತೊಡಗಿಸಬೇಕು. ಮಕ್ಕಳ ಕೈಗೆ ಯಾವುದೇ ಕಾರಣಕ್ಕೂ ಮೊಬೈಲ್ ಕೊಡಬೇಡಿ. ಮೊಬೈಲ್ ಪೋನ್ ಕೊಟ್ಟಷ್ಟು ನಿಮ್ಮಿಂದ ಅವರು ದೂರವಾಗುತ್ತಾರೆ ಎಂದರು. ಬಾಗೆ ಜೆಎಸ್ಎಸ್ ಪಬ್ಲಿಕ್ ಶಾಲೆ ಕಾಫಿ ತೋಟಗಳ ಸುಂದರವಾದ ನಿಸರ್ಗದ ಪರಿಸರದಲ್ಲಿ ಇದೆ. ಇಂತಹ ಪರಿಸರದಲ್ಲಿ ಇರುವ ಶಾಲೆಯ ವಾತಾರವಣ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿ ಆಗಿದೆ. ಇಂತಹ ವಿಶಾಲವಾದ ಆಟದ ಮೈದಾನ ಜಿಲ್ಲೆಯ ಬೇರೆ ಯಾವುದೇ ಶಾಲೆಯಲ್ಲಿಯೂ ಸಹ ಇಲ್ಲ ಇಂತಹ ಆಟದ ಮೈದಾನದಲ್ಲಿ ಹಲವು ಕ್ರೀಡಾಪಟುಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಗೆ ಜೆಎಸ್ಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಬಿ. ಮಧುಕುಮಾರ್ ಮಾತನಾಡಿ, ಸೋಲು,ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡಿ. ಇಂದಿನ ಸೋಲನ್ನು ಮುಂದಿನ ಗೆಲುವಿಗೆ ಮೆಟ್ಟಿಲು ಮಾಡಿಕೊಳ್ಳಿ’ ಎಂದು ಕಿವಿ ಮಾತು ಹೇಳಿದರು.
ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಹಾಸನ ಜಿಲ್ಲೆಯ 20 ಸಿಬಿಎಸ್‌ಇ ಶಾಲೆಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ ಸುಮಾರು 549 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ, 89 ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿದ್ದರು.
ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿ ಹಾಸನ ಪಬ್ಲಿಕ್ ಶಾಲೆ, ಬಾಲಕಿಯರ ವಿಭಾಗದಲ್ಲಿ ಹಾಸನದ ವಿದ್ಯಾಸೌಧ ಪಬ್ಲಿಕ್ ಶಾಲೆ, ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಬಾಗೆ ಜೆಎಸ್ಎಸ್ ಪಬ್ಲಿಕ್ ಶಾಲೆ, ಬಾಲಕಿಯರ ವಿಭಾಗದಲ್ಲಿ ಹಾಸನ ಪಬ್ಲಿಕ್ ಶಾಲೆ ಅತಿ ಹೆಚ್ಚು ಬಹುಮಾನಗಳನ್ನು ಪಡೆದು ಚಾಂಪಿಯನ್ ಟ್ರೋಫಿ ಗಳಿಸಿದರು.
ರುಚಿತಾ ಸ್ವಾಗತಿಸಿದರು. ಜೀವಿತಾ ಮತ್ತು ಧನ್ವಿ ನಿರೂಪಿಸಿದರು. ಧೃವ ಪ್ರಾರ್ಥಿಸಿದರು. ಸೋಹನ್ ವಂದಿಸಿದರು. ಉಪ ಪ್ರಾಂಶುಪಾಲ ಯೋಗೇಶ್ ಹಾಗೂ ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.