ADVERTISEMENT

ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್ ಹುಟ್ಟೂರಿನಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 14:21 IST
Last Updated 5 ಸೆಪ್ಟೆಂಬರ್ 2021, 14:21 IST
ಸುಹಾಸ್‌ ಯತಿರಾಜ್‌ ಅವರ ಹುಟ್ಟೂರು ಅರಸೀಕೆರೆ ತಾಲ್ಲೂಕಿನ ಲಾಳನಕೆರೆಯಲ್ಲಿ ಗ್ರಾಮದಲ್ಲಿ ಸಂಭ್ರಮ
ಸುಹಾಸ್‌ ಯತಿರಾಜ್‌ ಅವರ ಹುಟ್ಟೂರು ಅರಸೀಕೆರೆ ತಾಲ್ಲೂಕಿನ ಲಾಳನಕೆರೆಯಲ್ಲಿ ಗ್ರಾಮದಲ್ಲಿ ಸಂಭ್ರಮ   

ಹಾಸನ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಶೆಟಲ್ ಬ್ಯಾಡ್ಮಿಂಟನ್ (ಎಸ್‌ಎಲ್–4) ನಲ್ಲಿ ಬೆಳ್ಳಿ ಪದಕ ಪಡೆದ ಸುಹಾಸ್‌ ಯತಿರಾಜ್‌ ಅವರ ಹುಟ್ಟೂರು ಅರಸೀಕೆರೆ ತಾಲ್ಲೂಕಿನ ಲಾಳನಕೆರೆಯಲ್ಲಿಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.

ಗ್ರಾಮದ ಜನರು ಸಿಹಿ ಹಂಚಿ, ಕುಣಿದು ಕುಪ್ಪಳಿಸಿದರು. ತಮ್ಮ ಸಾಧನೆಯ ಮೂಲಕ ಹಾಸನದ ಹಳ್ಳಿಯನ್ನೂ ಜಗತ್ತಿಗೆ ಪರಿಚಯಿಸಿದ್ದು ಜನರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

1983ರ ಜುಲೈ 2 ರಂದು ಹಾಸನದ ಶಾರದಾ ನರ್ಸಿಂಗ್ಹೋಂನಲ್ಲಿ ಸುಹಾಸ್ ಯತಿರಾಜ್ ಜನಿಸಿದರು. ತಾಯಿ ಜಯಶ್ರೀ. ತಂದೆ ಯತಿರಾಜ್ ಮಲ್ನಾಡ್ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ ಓದಿ ನೀರಾವರಿ ಇಲಾಖೆಯಲ್ಲಿ ಸಹಾಯಕ ನಂತರ, ಕಾರ್ಯಪಾಲಕ ಎಂಜಿನಿಯರ್ ಆಗಿದ್ದರು. ನಗರದ ಹೇಮಾವತಿ ನಗರದ ಯತೀಂದ್ರ ಕಾನ್ವೆಂಟ್ ಬಳಿಯ ಮನೆಯೊಂದರಲ್ಲಿ ವಾಸವಾಗಿದ್ದರು.

ಯತಿರಾಜ್ ಅವರ ತಂದೆ (ಸುಹಾಸ್ ತಾತ) ಕೃಷ್ಣಯ್ಯಂಗಾರ್ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಲಾಳನಕೆರೆ ಗ್ರಾಮದವರು. 1950ರ ದಶಕದಲ್ಲಿ ಇಲ್ಲಿ ನೆಲೆಸಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ತಾಯಿ ಜಯಶ್ರೀ ಸಹ ಲಾಳನಕೆರೆ ಸಮೀಪದ ಚಿಕ್ಕನೇನಹಳ್ಳಿಯವರು. ಇವರು ಓದಿದ್ದೂ ನಗರದ ಎವಿಕೆ ಕಾಲೇಜಿನಲ್ಲಿ. ಹಾಸನದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಸುಹಾಸ್, ಶಿವಮೊಗ್ಗದ ಡಿವಿಎಸ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು ದಕ್ಷಿಣ ಕನ್ನಡದ ಸುರತ್ಕಲ್‌ನಲ್ಲಿರುವ ಎನ್‌ಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.