
ಸಕಲೇಶಪುರ: ‘ಕಡತ ಪರಿಶೀಲಿಸಿ ಅಧಿಕಾರಿ ಒಂದು ಸಹಿ ಹಾಕಿದರೆ, ಕೆಲವು ದಾಖಲೆಗಳನ್ನು ಆಗಲೇ ಸಾರ್ವಜನಿಕರಿಗೆ ನೀಡಬಹುದು. ಆದರೆ, ವಾರ, ತಿಂಗಳುಗಟ್ಟಲೆ ಕೆಲ ಅಧಿಕಾರಿಗಳು ಹಾಗೂ ನೌಕರರು, ಜನರನ್ನು ಕಚೇರಿಗೆ ಅಲೆಸುವುದು ಏಕೆ’ ಎಂದು ಶಾಸಕ ಸಿಮೆಂಟ್ ಮಂಜು ಪ್ರಶ್ನಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಆರೋಪಗಳು ನಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಇದೆ ಎಂದರು.
‘ಕೆಲಸ ಕಾರ್ಯಗಳನ್ನು ಬಿಟ್ಟು, ಒಂದು ದಾಖಲೆಗಾಗಿ ತಾಲ್ಲೂಕು ಕೇಂದ್ರಕ್ಕೆ ಅಲೆಯುವುದರಿಂದ ಆಗುವ ಸಮಸ್ಯೆ ಅನುಭವಿಸಿದವರಿಗೆ ಗೊತ್ತು. ನಮ್ಮ ತಾಲ್ಲೂಕಿನ ಮಾವಿನೂರು, ಬಿಸಿಲೆ, ಗೊದ್ದು, ಕಾಗಿನಹರೆ, ಕಾಡಮನೆ, ದೇವಾಲದಕೆರೆ ಈ ಭಾಗದ ಕಾಡಂಚಿನ ಗ್ರಾಮಗಳು ತಾಲ್ಲೂಕು ಕೇಂದ್ರದಿಂದ 40 ರಿಂದ 50 ಕಿ.ಮೀ. ದೂರದಲ್ಲಿವೆ. ಒಬ್ಬ ರೈತ ಆ ಗ್ರಾಮಗಳಿಂದ ಬಸ್ ಟಿಕೆಟ್, ಊಟ, ತಿಂಡಿ ಸೇರಿ ಒಂದು ಸಾರಿ ಬಂದು ಹೋಗಲು ಕನಿಷ್ಠ ₹500ಕ್ಕೂ ಹೆಚ್ಚು ಖರ್ಚಾಗುತ್ತದೆ. ಅಧಿಕಾರಿಗಳು ಹಾಗೂ ನೌಕರರು ಇಂತಹ ಗಂಭೀರ ಸಮಸ್ಯೆಗಳನ್ನು ಅರಿತು, ರೈತರು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಿ’ ಎಂದು ಸೂಚಿಸಿದರು.
ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ನಿಲಯಗಳಿಗೆ ಅಧಿಕಾರಿಗಳು ಆಗಾಗ ಭೇಟಿ ನೀಡಿ ಆಹಾರದ ಗುಣಮಟ್ಟ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಅಲ್ಲಿಗೆ ಬೇಕಾದ ಅಗತ್ಯತೆಗಳನ್ನು ಗಮನಕ್ಕೆ ತಂದರೆ, ಸಂಬಂಧಪಟ್ಟ ಸಚಿವರನ್ನು ಖುದ್ದು ಭೇಟಿ ನೀಡಿ ವ್ಯವಸ್ಥೆ ಸರಿಪಡಿಸಲಾಗುವುದು. ಅಧಿಕಾರಿಗಳು ಭೇಟಿಯನ್ನೇ ಮಾಡದೇ, ಬೇಡಿಕೆಯನ್ನೇ ಸಲ್ಲಿಸದಿದ್ದರೆ ನಮಗೆ ಹೇಗೆ ಗೊತ್ತಾಗುತ್ತದೆ ಎಂದರು.
ಅಂಗನವಾಡಿ ಕೇಂದ್ರಗಳಿಗೆ ಸ್ಥಳ ಪರಿಶೀಲನೆ ಮಾಡಿ, ಉದ್ಘಾಟನೆ ಆಗದ ಕಟ್ಟಡಗಳ ಮಾಹಿತಿ ನೀಡಬೇಕು. ಹಲವಾರು ಅಂಗನವಾಡಿಗಳಲ್ಲಿ ವಿದ್ಯುತ್ ಸಮಸ್ಯೆ ಇದೆ. ವಾಟರ್ ಫಿಲ್ಟರ್, ಗೋದಾಮುಗಳ ಸ್ಥಿತಿಯೂ ಪರಿಶೀಲನೆ ಮಾಡಬೇಕು ಎಂದರು.
ಕಲ್ಬುರ್ಗಿಗೆ ವರ್ಗಾವಣೆ ಆಗಿರುವ ₹25 ಕೋಟಿ ಮಳೆಹಾನಿ ಅನುದಾನದಿಂದ ಕ್ಷೇತ್ರದ ಅಂಗನವಾಡಿ ಮತ್ತು ಶಾಲಾ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆ ಮಾಡಲಾಗಿದೆಯೇ ಎಂಬುದರ ಕುರಿತು ನೈಜ ವರದಿ ನೀಡಬೇಕು. 29 ಕಾಮಗಾರಿಗಳಲ್ಲಿ 17 ಮಾತ್ರ ಪೂರ್ಣಗೊಂಡಿದ್ದು, ಉಳಿದ 12 ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕಿನಲ್ಲಿ ಪಶುವೈದ್ಯಕೀಯ ಇಲಾಖೆಯಲ್ಲಿ 68 ಹುದ್ದೆಗಳಿದ್ದು, ಇದರಲ್ಲಿ ಕೇವಲ 16 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 48 ಹುದ್ದೆಗಳು ಖಾಲಿ ಇವೆ. ಇದರಿಂದ ಕೆಲಸ ಮಾಡುವುದಕ್ಕೆ ಕಷ್ಡವಾಗುತ್ತಿದೆ ಎಂದು ಇಲಾಖೆಯ ಡಾ. ವೆಂಕಟೇಶ್ ತಿಳಿಸಿದರು.
ಉಪ ವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ಕೆ.ಎಸ್. ಸುಪ್ರೀತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಜಿ. ಗಂಗಾಧರ್, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಡಿವೈಎಸ್ಪಿ ಮಾಲತೀಶ್, ಬಿಇಒ ಪುಷ್ಪ, ಆರ್‌ಎಫ್‌ಒ ಎಚ್.ಆರ್. ಹೇಮಂತ್‌ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಮುರುಗೇಶ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಎಚ್.ಎ. ಆದಿತ್ಯ, ಹರೀಶ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
Quote - ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಹೆಚ್ಚಿನ ದೂರುಗಳು ಕೇಳಿಬರುತ್ತಿದ್ದು ಸಾರ್ವಜನಿಕರಿಗೆ ತೊಂದರೆ ಕೊಡದೇ ಜನಸೇವೆ ಮನೋಭಾವದಿಂದ ಕೆಲಸ ಮಾಡಬೇಕು ಸಿಮೆಂಟ್ ಮಂಜು ಶಾಸಕ
ಸರ್ಕಾರ ಔಷಧಿ ಪೂರೈಸುತ್ತಿಲ್ಲ
ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ 24X7 ತುರ್ತು ಚಿಕಿತ್ಸೆಗೆ ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿ ಅಗತ್ಯವಿದೆ. ಹೆಚ್ಚುವರಿ ಶುಶ್ರೂಷಕರ ನೇಮಕ ಆಗಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಮಲೆನಾಡಿನ ಈ ಭಾಗದಲ್ಲಿ ಕಂಡುಬರುವ ರೋಗಗಳಿಗೆ ಬೇಕಾದ ಔಷಧಿಗಳನ್ನು ಸರ್ಕಾರ ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ. 12 ವರ್ಷ ಹಳೆಯ ಸ್ಕ್ಯಾನಿಂಗ್ ಯಂತ್ರವನ್ನು ಬದಲಾಯಿಸಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆ ದಾಖಲೆಗಳ ನಿರ್ವಹಣೆ ಹಾಗೂ ಕಸ ವಿಲೇವಾರಿ ಕ್ರಮಬದ್ಧವಾಗಿರಬೇಕು. ಆಂಬುಲೆನ್ಸ್ ಸೇವೆ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಸೀಮಿತವಾಗಿದ್ದು ಎರಡು ಶಿಫ್ಟ್‌ಗಳಲ್ಲಿ ವಿಸ್ತರಣೆ ಮಾಡಬೇಕು ಎಂದು ಸಿಮೆಂಟ್ ಮಂಜು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.