ADVERTISEMENT

‘ಕೇಂದ್ರದ ಯೋಜನೆ: ಜನರಿಗೆ ಮಾಹಿತಿ ಇಲ್ಲ’: ಡಾ.ಡಿ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 16:08 IST
Last Updated 28 ಸೆಪ್ಟೆಂಬರ್ 2021, 16:08 IST
ಹಾಸನದ ಗೋಮತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ‘ನಮ್ಮ ಕಸ ನಮ್ಮ ಜವಾಬ್ದಾರಿ ಪೋಸ್ಟರ್‌’ ಬಿಡುಗಡೆ ಮಾಡಿದರು. ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಪ್ರಸನ್ನ ಎನ್‌. ರಾವ್‌, ಪ್ರಾದೇಶಿಕ ಯೋಜನಾ ನಿರ್ದೇಶಕ ಗಂಗಾಧರ್‌‌ ರೈ, ಜಿಲ್ಲಾ ನಿರ್ದೇಶಕರಾದ ಜಯರಾಂ, ಮಹಾಬಲ ಕುಲಾಲ್‌ ಇದ್ದಾರೆ.
ಹಾಸನದ ಗೋಮತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ‘ನಮ್ಮ ಕಸ ನಮ್ಮ ಜವಾಬ್ದಾರಿ ಪೋಸ್ಟರ್‌’ ಬಿಡುಗಡೆ ಮಾಡಿದರು. ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಪ್ರಸನ್ನ ಎನ್‌. ರಾವ್‌, ಪ್ರಾದೇಶಿಕ ಯೋಜನಾ ನಿರ್ದೇಶಕ ಗಂಗಾಧರ್‌‌ ರೈ, ಜಿಲ್ಲಾ ನಿರ್ದೇಶಕರಾದ ಜಯರಾಂ, ಮಹಾಬಲ ಕುಲಾಲ್‌ ಇದ್ದಾರೆ.   

ಹಾಸನ: ‘ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಜನಗಳ ಪಾಲುದಾರಿಕೆ ಬಹಳ ಮುಖ್ಯ. ಸೇವಾ ಪ್ರತಿನಿಧಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದ ಗೋಮತಿ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ
ಮಂಗಳವಾರ ಜಿಲ್ಲೆಯ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ ಹಾಗೂ ಸೇವಾ ಪ್ರತಿನಿಧಿಗಳಿಗೆ
ಆಯೋಜಿಸಿದ್ದ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಯೋಜನೆಗಳಿದ್ದು, ಬಹಳಷ್ಟು ಜನರಿಗೆ ಅದರ ಅರಿವು ಇಲ್ಲ. ಹಾಗಾಗಿ ಕೇಂದ್ರ ಸರ್ಕಾರದ 600ಯೋಜನೆಗಳನ್ನು ಜನರಿಗೆ ತಲುಪಿಸಲು ಒಂದು ಏಜೆನ್ಸಿ ಸ್ಥಾಪಿಸುವ ಸಂಕಲ್ಪ ಇದೆ’ ಎಂದು ಹೇಳಿದರು.

ADVERTISEMENT

‘ಕೃಷಿ ಪ್ರಧಾನ ಹಾಸನ ಜಿಲ್ಲೆಯಲ್ಲಿ ಹಿಂದೆ ದನಗಳ ಜಾತ್ರೆವಿಜೃಂಭಣೆಯಿಂದ ನಡೆಯುತ್ತಿತ್ತು. 10 ಸಾವಿರಕ್ಕೂ ಹೆಚ್ಚಿನ ಎತ್ತಿನ ಗಾಡಿಗಳು ಬರುತ್ತಿದ್ದವು. ಹಾಸನ ದನಗಳ ಜಾತ್ರೆಯಲ್ಲಿ ಪ್ರಥಮ ಬಹುಮಾನ ಪಡೆದ ಜೋಡಿಯನ್ನು ನಾನು ಮತ್ತು ನಮ್ಮ ತಂದೆ ಖರೀದಿ ಮಾಡಿದ್ದನ್ನು ಮರೆತಿಲ್ಲ. ಈಗ ಆ ವೈಭವ ಕಣ್ಮರೆಯಾಗುತ್ತಿದೆ’ ಎಂದರು.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೇ 70ರಷ್ಟು ಸದಸ್ಯರು ಜನಧನ ಖಾತೆ ತೆರೆದಿದ್ದಾರೆ.
ಇದರಿಂದ ಅವರಿಗೆ ಕೇಂದ್ರ ಸರ್ಕಾರದ ಯೋಜನೆಗಳು ಸುಲಭವಾಗಿ ತಲುಪಲಿವೆ. ಜತೆಗೆ ಕೃಷಿ, ಜ್ಞಾನ
ವಿಕಾಸ, ಸ್ವ ಉದ್ಯೋಗಕ್ಕೂ ಆದ್ಯತೆ ನೀಡಲಾಗುತ್ತಿದೆ’ ಎಂದು ಹೇಳಿದರು.

ಕೋವಿಡ್‌ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲು ಏಕೆ ಆಗುವುದಿಲ್ಲ ಎಂದು
ಹಲವರು ಪ್ರಶ್ನಿಸಿದರು. ಸಂಘದ ಮೂಲಕ ಬ್ಯಾಂಕ್‌ನಿಂದ ನೇರವಾಗಿ ಕೊಡಿಸಿರುವ ಸಾಲ. ನಮ್ಮ
ಯೋಜನೆ ಮೇಲೆ ಇಂದಿಗೂ ಬ್ಯಾಂಕ್‌ನಲ್ಲಿ ₹ 15 ಸಾವಿರ ಕೋಟಿ ಸಾಲ ಇದೆ. ಶಿಸ್ತು, ವ್ಯವಸ್ಥೆ
ಸರಿಯಾಗಿದ್ದರೆ ದೀರ್ಘ ಕಾಲದ ವರೆಗೂ ಈ ಯೋಜನೆ ನಡೆಸಿಕೊಂಡು ಹೋಗಬಹುದು ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ನಿರ್ದೇಶಕ ಪುರುಷೋತ್ತಮ್‌, ರೋಟರಿಕ್ಲಬ್‌ ಆಫ್‌ ಕ್ವಾಂಟಾ ಅಧ್ಯಕ್ಷ ಶಿವಕುಮಾರ್‌, ಜನಜಾಗೃತಿ ವೇದಿಕೆ ಅಧ್ಯಕ್ಷ ಅಣ್ಣಪ್ಪಶೆಟ್ಟಿ, ಸದಸ್ಯಬಿ.ಆರ್‌.ಬೊಮ್ಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.