
ಚನ್ನರಾಯಪಟ್ಟಣ: ಕೇಂದ್ರ ರಸ್ತೆನಿಧಿಯಿಂದ ತಾಲ್ಲೂಕಿನಲ್ಲಿ ರಸ್ತೆ ನಿರ್ಮಿಸಲು ಅಂದಾಜು ₹100 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಪುರಸಭೆಯ ಅನುದಾನ ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಸಂಕೀರ್ಣದ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಯಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಪಟ್ಟಣದಲ್ಲಿ ಈ ಹಿಂದೆ ಇದ್ದ ವಾಣಿಜ್ಯ ಮಳಿಗೆ ಶಿಥಿಲವಾಗಿದ್ದರಿಂದ ಅದನ್ನು ತೆರವುಗೊಳಿಸಿ ಈಗ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಲಾಗಿದೆ. 14 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 400 ಜನ ಕುಳಿತುಕೊಳ್ಳಲು ಅನುಕೂಲವಾಗುವಂತೆ ಸಭಾಭವನ ನಿರ್ಮಿಸಲಾಗುವುದು. ಮೇಲಂತಸ್ತಿನ ಕಟ್ಟಡಕ್ಕೆ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಹೆಸರನ್ನು ನಾಮಕಾರಣ ಮಾಡಲಾಗುವುದು ಎಂದು ಹೇಳಿದರು.
2024-25ರಿಂದ ಇದುವರೆಗೆ ಅಂದಾಜು ₹9 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಒಳಚರಂಡಿ, ರಸ್ತೆ ಹಾಗು ಚರಂಡಿ ನಿರ್ಮಿಸಲಾಗಿದೆ. ₹3.25 ಕೋಟಿ ವೆಚ್ಚದಲ್ಲಿ ಪುರಭವನದ ಮೊದಲನೇ ಹಂತದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ ಮತ್ತೆ ₹3 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದ ಅವರು, ನ. 11ರಂದು ತಾಲ್ಲೂಕು ಕಚೇರಿ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮ ಏರ್ಪಡಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಭಾಗವಹಿಸುವರು. ಜನರಿಂದ ಆಹವಾಲುಗಳನ್ನು ಸ್ವೀಕರಿಸಲಾಗುವುದು ಎಂದರು.
ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಮಾತನಾಡಿ, ‘ತಾಲ್ಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್ ಹಾಗು ಗಾಂಧೀಜಿ ಪ್ರತಿಮೆ ಸ್ಥಾಪಿಸಲು ಶಾಸಕ ಸಿ.ಎನ್. ಬಾಲಕೃಷ್ಣ ವೈಯಕ್ತಿಕವಾಗಿ ₹37 ಲಕ್ಷ ನೀಡಿದ್ದಾರೆ. ಅದೇ ರೀತಿ ಇವೆರಡು ಪ್ರತಿಮೆ ಸ್ಥಾಪಿಸಲು ಅನುಕೂಲವಾಗುವಂತೆ ಅಡಿಪಾಯ, ಆವರಣದಲ್ಲಿ ಅಭಿವೃದ್ದಿ ಕೈಗೊಳ್ಳಲು ಪುರಸಭೆವತಿಯಿಂದ 30 ಲಕ್ಷ ಹಣ ನೀಡಲಾಗಿದೆ’ ಎಂದರು.
ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅದ್ಯಕ್ಷ ಎಸ್.ಎ. ಗಣೇಶ್, ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್. ಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್. ವೆಂಕಟೇಶ್, ನಗರಾಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ತ್ಯಾಗರಾಜು, ಪುರಸಭಾಸದಸ್ಯರಾದ ರೇಖಾ ಅನಿಲ್, ಲಕ್ಷ್ಮಿ, ಕೆ.ಎನ್. ಬನಶಕರಿ, ರಾಧಾ, ಜಿ.ಆರ್. ಸುರೇಶ್, ರಾಣಿ, ರವಿ, ಉಮಾಶಂಕರ್, ಪ್ರೇಮ್‍ಕುಮಾರ್, ರಾಮಕೃಷ್ಣ, ಮುಖ್ಯಾಧಿಕಾರಿ ಆರ್. ಯತೀಶ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.