ADVERTISEMENT

ಹಾಸನ | ಶತಕ ದಾಟಿದ ಕೊರೊನಾ ಪಾಸಿಟಿವ್‌ ಪ್ರಕರಣ

ಎರಡು ಸಾವು, ಸೋಂಕಿತರ ಸಂಖ್ಯೆ 1239ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 14:24 IST
Last Updated 23 ಜುಲೈ 2020, 14:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಗುರುವಾರ ಶತಕ ದಾಟಿದೆ. 112 ಜನರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು, ಒಂದೇ ದಿನ ಗರಿಷ್ಠ ಪ್ರಕರಣ ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 1239ಕ್ಕೆ ಏರಿಕೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಅರಕಲಗೂಡು ತಾಲ್ಲೂಕಿನ 60 ವರ್ಷದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಹಾಸನ ತಾಲ್ಲೂಕಿನ 58 ವರ್ಷದ ಪುರುಷ ಉಸಿರಾಟ ಹಾಗೂ ಮಧುಮೇಹ ಸಮಸ್ಯೆ ಇತ್ತು. ಇಬ್ಬರು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ತಿಳಿಸಿದರು.

ವಿದೇಶದಿಂದ ಮರಳಿದ್ದ ಹಾಸನದ 36 ವರ್ಷದ ಪುರುಷ, ಹೈದರಾಬಾದ್‌‌ನಿಂದಬಂದಿದ್ದಹಾಸನದ 26 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಉಳಿದಂತೆ ಬೆಂಗಳೂರು, ತುಮಕೂರು, ಅಂತರರಾಷ್ಟ್ರೀಯ ಪ್ರಯಾಣ ಹಿನ್ನೆಲೆ, ಶೀತ ಜ್ವರ ಮಾದರಿ ಅನಾರೋಗ್ಯ, ಉಸಿರಾಟದ ಸಮಸ್ಯೆ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಹೆಚ್ಚು ಜನರಿಗೆ ಪಾಸಿಟಿವ್‌ ಬಂದಿದೆ. ಹಲವು ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆ ಮಾಡಲಾಗುತ್ತಿದೆ.

ಈವರೆಗೆ 653 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 549 ಸಕ್ರಿಯ ಪ್ರಕರಣಗಳಿದ್ದು, 27 ಮಂದಿ ಐಸಿಯುನಲ್ಲಿ ಇದ್ದಾರೆ. ಇದುವರೆಗೆ 37 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದರು.

ADVERTISEMENT

112 ಪ್ರಕರಣಗಳಲ್ಲಿ ಅರಸೀಕೆರೆ ತಾಲ್ಲೂಕಿನ 15, ಚನ್ನರಾಯಪಟ್ಟಣ 9, ಹಾಸನ 48, ಹೊಳೆನರಸೀಪುರ 8, ಸಕಲೇಶಪುರ 14, ಅರಕಲಗೂಡು 6 ಹಾಗೂ ಬೇಲೂರು ತಾಲ್ಲೂಕಿನ 12 ಜನರಿಗೆ ಸೋಂಕುಪತ್ತೆಯಾಗಿದೆ.

ಹಾಸನ ನಗರಸಭೆ ನೌಕರನಿಗೆ ಕೋವಿಡ್‌ ದೃಢಪಟ್ಟಿದ್ದು, ಕಚೇರಿಯನ್ನು ಸ್ಯಾನಿಟೈಸ್‌ ಮಾಡಿ 48 ಗಂಟೆ ಸೀಲ್‌ಡೌನ್
ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.